ಯೋಗ ಮಾನಸಿಕವಾಗಿ ಶಾಂತ, ಭಾವನಾತ್ಮಕ ತೃಪ್ತಿ ನೀಡಲಿದೆ – ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

0
43
Share this Article
0
(0)
Views: 0

ಬೆಂಗಳೂರು, ಜೂನ್ 21:

ಯೋಗ ಮಾನಸಿಕವಾಗಿ ಶಾಂತಿ ಮತ್ತು ಭಾವನಾತ್ಮಕ ತೃಪ್ತಿ ನೀಡಲಿದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗವು ಉತ್ತಮ ಮಾರ್ಗವಾಗಿದೆ. ಯೋಗ ಮಾಡುವಾಗ, ನಾವು ದೈಹಿಕವಾಗಿ ಆರೋಗ್ಯಕರ, ಮಾನಸಿಕವಾಗಿ ಶಾಂತ ಮತ್ತು ಭಾವನಾತ್ಮಕವಾಗಿ ತೃಪ್ತಿ ಹೊಂದುತ್ತೇವೆ. ಯೋಗ ಭಾರತೀಯ ಸಂಪ್ರದಾಯ ಮತ್ತು ಸಂಸ್ಕøತಿಯ ಅಮೂಲ್ಯ ಕೊಡುಗೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಇಂದು ಆಯುಷ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಪಾಲರು ಯೋಗಭ್ಯಾಸ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯೋಗವನ್ನು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿ ಮತ್ತು ಸಂಪ್ರದಾಯಗಳಲ್ಲಿ ಸೇರಿಸಲಾಗಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ, ಅದಕ್ಕಾಗಿಯೇ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿನ ಧರ್ಮಗಳ ಸಂಸತ್ತಿನಲ್ಲಿ ಯೋಗದ ವೈಶಿಷ್ಟ್ಯಗಳನ್ನು ಪ್ರಸ್ತಾಪಿಸಿದರು ಮತ್ತು ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದರು. 27 ಸೆಪ್ಟೆಂಬರ್ 2014 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಯೋಗವನ್ನು ಅಳವಡಿಸಿಕೊಳ್ಳಲು ಪ್ರಪಂಚದ ಎಲ್ಲಾ ದೇಶಗಳಿಗೆ ಕರೆ ನೀಡಿದರು ಮತ್ತು ಪ್ರತಿ ವರ್ಷ ಯೋಗ ದಿನವನ್ನು ಆಚರಿಸಲು ಪ್ರಸ್ತಾಪಿಸಿದರು. ಅವರ ಪ್ರಸ್ತಾಪವನ್ನು 172 ದೇಶಗಳು ಬೆಂಬಲಿಸಿದವು. ಅಂದಿನಿಂದ, ದೇಶ ಮತ್ತು ಪ್ರಪಂಚದಲ್ಲಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬುದು. ಯೋಗವು ವೈಯಕ್ತಿಕ ಆರೋಗ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಯೋಗವು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿಡುವ ಶಕ್ತಿಯನ್ನು ಹೊಂದಿದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯೋಗವು ಸಹಾಯಕವಾಗಿದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದರು.

26 ನೇ ರಾಷ್ಟ್ರೀಯ ಯುವ ಉತ್ಸವವನ್ನು ಆಯೋಜಿಸುವ ಸಂದರ್ಭದಲ್ಲಿ, ಜನವರಿ 15, 2023 ರಂದು, ಕರ್ನಾಟಕ ರಾಜ್ಯದಲ್ಲಿ ಯೋಗದ ಬೃಹತ್ ಕಾರ್ಯಕ್ರಮವನ್ನು ರಚಿಸಲಾಯಿತು, ಯೋಗಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಲಾಯಿತು. ಕರ್ನಾಟಕ ಸರ್ಕಾರವು “ಹರ್ ಘರ್ ಯೋಗ” ದ ಮೂಲಕ ಕರ್ನಾಟಕ ರಾಜ್ಯವನ್ನು ಭಾರತದ ಪ್ರಮುಖ ಯೋಗ ಸಾಕ್ಷರ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದೆ. ಭಾರತವೆಂಬ ಪುಣ್ಯಭೂಮಿಯಿಂದ ಹುಟ್ಟಿಕೊಂಡ ಯೋಗವು ‘ವಸುಧೈವ ಕುಟುಂಬಕಂ’ ಮತ್ತು ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯ ಎಂಬ ಚಿಂತನೆಯೊಂದಿಗೆ ಜನರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನಾನು ಸ್ವತಃ ಯೋಗ ಪಟುವಾಗಿದ್ದು, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮದ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿದ್ದೇನೆ. ತಾವೆಲ್ಲರೂ ಯೋಗಾಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯೋಗದ ಮಹತ್ವವನ್ನು ವಿವರಿಸುವ ಮೂಲಕ ಯೋಗದತ್ತ ಜಗತ್ತಿನ ಜನರನ್ನು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳಬೇಕಾದರೆ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಶರೀರ ಉತ್ತಮವಾಗಿರುತ್ತದೆ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.

ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಯೋಗಕ್ಕೆ ಇಡೀ ದೇಶ ಅಲ್ಲ ಇಡೀ ಪ್ರಪಂಚವನ್ನು ನಮ್ಮ ಧರ್ಮ, ನಮ್ಮ ಸಂಸ್ಕøತಿ, ನಮ್ಮ ಪದ್ಧತಿ ಇವೆಲವನ್ನೂ ಕೂಡ ಒಪ್ಪಿಕೊಂಡು ಇಡೀ ವಿಶ್ವ ನಮ್ಮ ಗಮನವನ್ನು ಸೆಳೆದಿದೆ. ಆನೇಕ ಹಿರಿಯರು, ಮಹರ್ಷಿಗಳು ಕೂಡ ಇದಕ್ಕೆ ಹೆಚ್ಚಿನ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಜಾತಿ, ಕುಲ, ಗೋತ್ರ, ಧರ್ಮ, ಪ್ರದೇಶ ಎಲ್ಲವನ್ನೂ ಮೀರಿಸಿ ಈ ಯೋಗ ಮುಂದಕ್ಕೆ ಸಾಗುತ್ತಿದೆ ಎಂದು ಹೇಳಿದರು.

ಯೋಗ ದೇಶದ ಆಸ್ತಿ, ಯೋಗಕ್ಕೆ ಪ್ರೋತ್ಸಾಹ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶ ಇಡೀ ಪ್ರಪಂಚಕ್ಕೆ ಈ ಯೋಗಾಭ್ಯಾಸವನ್ನು ಪರಿಚಯಿಸಿದೆ. ಎಲ್ಲರಿಗೂ ಶಕ್ತಿ ತುಂಬಬೇಕು, ಆರೋಗ್ಯವಂತರಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಧೈರ್ಯವನ್ನು ತುಂಬುವ ದೃಷ್ಟಿಯಿಂದ ಸರ್ಕಾರವು ಇಂತಹ ಪವಿತ್ರವಾದ ಕೆಲಸಗಳಿಗೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, ಯೋಗ ದಿನಾಚರಣೆಯ ಪೂರ್ವಬಾವಿಯಾಗಿ “ಯೋಗೋತ್ಸವ” ಎಂಬ ಹತ್ತು ದಿನಗಳ ವಿಶಿಷ್ಟವಾದ ಕಾರ್ಯಕ್ರಮವನ್ನು ಇದೇ ಜೂನ್ 10 ರಿಂದ 20 ರವರಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನಕ್ಕೆ ಹಾಗೂ ವೆಬ್ ಸೈಟ್ www.yogotsava.com ಗೆ ಜೂನ್ 11 ರಂದು ಚಾಲನೆ ನೀಡಲಾಗಿತ್ತು.

“ಯೋಗೋತ್ಸವ” ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ 664 ವಸತಿ ನಿಲಯದ 90300 ವಿದ್ಯಾರ್ಥಿಗಳು, ಕರ್ನಾಟಕ ವಸತಿ ಶಿಕ್ಷಣ ಸಂಘದ ವಸತಿ 831 ಶಾಲೆಗಳು 87000 ವಿದ್ಯಾರ್ಥಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ-ಸಹಾಯ ಸಂಘದ 5000 ಸದಸ್ಯರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ 180000 ವಿದ್ಯಾರ್ಥಿಗಳು, ಬೆಂಗಳೂರು ಅಪಾರ್ಟ್‍ಮೆಂಟ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ವಿವಿಧ ವಸತಿ ಸಮುಚ್ಛಯಗಳ 1023 ನಾಗರೀಕರು, ವಾಣಿಜ್ಯ ಸಂಕೀರ್ಣಗಳಾದ ಫಿನಿಕ್ಸ್ – ಮಾಲ್ ಆಫ್ ಏಷ್ಯಾ ಯಲಹಂಕ ಮತ್ತು ಲುಲು ಮಾಲ್ ರಾಜಾಜಿನಗರ ಇಲ್ಲಿಗೆ ಭೇಟಿ ನೀಡಿದ 10000 ಕ್ಕೂ ಅಧಿಕ ಸಾರ್ವಜನಿಕರು, ಜೈನ ವಿಶ್ವಲವಿದ್ಯಾಲಯದ ವಿವಿಧ ಅಂಗ ಸಂಸ್ಥೆಗಳ 650 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಹೇಳಿದರು.

ಪ್ರಸಾರ ಭಾರತಿ ವತಿಯಿಂದ ಆಕಾಶವಾಣಿಯಲ್ಲಿ ತಜ್ಞ ವೈದ್ಯರೊಂದಿಗೆ ಯೋಗದ ಮಹತ್ವ ಹಾಗೂ ವಿವಿಧ ಆಯುಷ್ ಬೆಂಗಳೂರು ಪದ್ದತಿಗಳು ಪರಿಚಯ, ಆರೋಗ್ಯ ಸಲಹೆ, ಸಂವಾದ, ಸಂದರ್ಶನ ಇತ್ಯಾದಿ 12 ಕಾರ್ಯಕ್ರಮಗಳನ್ನು ಪ್ರಸಾರಗೊಳಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಯೋಗ ಸಂಸ್ಥೆಗಳಿಂದ ಯೋಗ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಶರವಣ, ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ, ಚಲನಚಿತ್ರ ನಟಿ ಅನು ಪ್ರಭಾಕರ್, ಚಲನಚಿತ್ರ ನಟ, ನಿರ್ಮಾಪಕರು ಮತ್ತು ನಿರ್ದೇಶಕರಾದ ಶರಣ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತ, ಆಯುಷ್ ಇಲಾಖೆ ಆಯುಕ್ತರಾದ ಶ್ರೀನಿವಾಸಲು ಮತ್ತು ಯೋಗ ಪಟುಗಳು ಭಾಗವಹಿಸಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here