Views: 0
ಧಾರವಾಡ ಮೇ.31:
2024-25 ನೆಯ ಸಾಲಿನ ಜಿಲ್ಲಾಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಧಾರವಾಡ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಕರಡಿಗುಡ್ಡದಲ್ಲಿ ಮೇ 31, 2024 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸ್ವರೂಪಾ.ಟಿ.ಕೆ ಯವರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಿ, ವಿದ್ಯಾರ್ಥಿ ಜೀವನದ ಮಹತ್ವ, ಗುರುಗಳ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಮ್ಮ ಬಾಲ್ಯದ ಶಾಲಾ ದಿನಗಳ ಅನುಭವಗಳನ್ನು ನೆನಪಿಸಿಕೊಂಡು ವಿವರಿಸಿದರು. ಶಾಲೆಯ ಉತ್ತಮ ಪರಿಸರ, ಸುಸಜ್ಜಿತವಾದ ಕಟ್ಟಡ, ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿಗಳನ್ನು ನೀಡುವ ಗೋಡೆ ಫಲಕಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶಿಕ್ಷಣವೆಂದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದೊಂದೇ ಅಲ್ಲ. ಜೀವನದಲ್ಲಿ ಉತ್ತಮ ಸಂಸ್ಕಾರ, ದೇಶಪ್ರೇಮ, ಗುರುಹಿರಿಯರು ಹಾಗೂ ಶಾಲೆಯ ಬಗ್ಗೆ ಗೌರವ ಮುಂತಾದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಧಾರವಾಡ ಗ್ರಾಮೀಣ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ. ಸದಲಗಿಯವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, 2023-24 ನೆಯ ಸಾಲಿನಲ್ಲಿ ಧಾರವಾಡ ತಾಲೂಕು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸಿದೆ. ಇದಕ್ಕೆ ಕಾರಣೀಭೂತರಾದ ತಾಲೂಕಿನ ಎಲ್ಲ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಗ್ರಾಮ ಪರಿವರ್ತನಾ ಟ್ರಸ್ಟ್ ನ ಅಧ್ಯಕ್ಷರಾದ ಶಿವಪ್ಪ ಕುರಗುಂದರವರು ಮಾತನಾಡಿ ಸರಕಾರವು ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತಮ ಶಿಕ್ಷಕರಿದ್ದಾರೆ. ಇದರ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳೂ ಪಡೆಯಬೇಕು ಎಂದು ಹೇಳಿದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪಾಂಡುರಂಗ ಅಂಕಲಿ ಅವರು ಶಾಲೆಗೆ ಗ್ರಾಮ ಪರಿವರ್ತನಾ ಟ್ರಸ್ಟಿನ ಸಹಕಾರವನ್ನು ಸ್ಮರಿಸಿದರು. ವಿದ್ಯಾರ್ಥಿಗಳಾದ ಸುಷ್ಮಾ ಮಡಿವಾಳರ, ಪ್ರೀತಿ ಸಂಗಪ್ಪನವರ, ಪೂಜಾರ ಶಾಲಾ ಪ್ರಾರಂಭೋತ್ಸವದ ಕುರಿತಾಗಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪಪ್ರಾಂಶುಪಾಲರಾದ ಡಾ. ಪೂರ್ಣಿಮಾ ಮುಕ್ಕುಂದಿಯವರು ಸರ್ವರನ್ನು ಸ್ವಾಗತಿಸಿದರು. ವಿಜಯಲಕ್ಷ್ಮೀ ಪುರಾಣಿಕಮಠ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಪ್ರೇಮಾ.ಎಲಿಗಾರ ವಂದಿಸಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಎನ್. ಟಿ. ಕಾಖಂಡಕಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ತನ್ವೀರ ಡಿ., ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶೇಖಪ್ಪ ಮಂಗಳಗಟ್ಟಿ, ಸದಸ್ಯರಾದ ಶಂಕ್ರಣ್ಣ ಬಾಚಗುಂಡಿ, ಶಿಕ್ಷಣ ಪ್ರೇಮಿಗಳಾದ ಮಲ್ಲಿಕಾರ್ಜುನ ಜಕ್ಕಣ್ಣವರ, ಶಿಕ್ಷಣ ಸಂಯೋಜಕರಾದ ಟಿ. ಎನ್. ಸಯ್ಯದ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದರು.