ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ, ಕಂದಾಯ, ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು

0
31
Share this Article
0
(0)
Views: 0

ಧಾರವಾಡ ಜೂನ್.13:

ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಅಂತಹ ಕೀಟಜನ್ಯ ರೋಗಗಳು ಹೆಚ್ಚಳವಾಗದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಸಾರ್ವಜನಿಕ ತಿಳುವಳಿಕೆ ಹಾಗೂ ಸಮೀಕ್ಷಾ ಕಾರ್ಯಗಳನ್ನು ಅಭಿಯಾನ ಮಾದರಿಯಲ್ಲಿ ಹಮ್ಮಿಕೊಳ್ಳಬೇಕು. ಮುಂದಿನ 15 ದಿನಗಳಲ್ಲಿ ಡೆಂಗ್ಯೂ ಶಂಕಿತ ಪ್ರಕರಣಗಳು ಕಡಿಮೆ ಆಗಿ, ಜ್ವರಪೀಡಿತರ ಸಂಖ್ಯೆ ಇಳಿಮುಖವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪಬ್ಲಿಕ್ ನೆಗ್ಲಿಜೆನಸಿ ಆ್ಯಕ್ಟ್ ಕೆಳಗೆ ಕ್ರಿಮಿನಲ್ ಕೆಸ್ ದಾಖಲಿಸುವದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೆಂಗ್ಯೂ ಶಂಕಿತ ಪ್ರಕರಣಗಳ ಪರಿಶೀಲನೆ ಹಾಗೂ ಆರೋಗ್ಯ, ಕಂದಾಯ, ಪಂಚಾಯತ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆ ಜರುಗಿಸಿ, ಮಾತನಾಡಿದರು.

ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂಧಿಸದೆ, ಅಧಿಕಾರಿಗಳ ನಿರ್ಲಕ್ಷ ಮತ್ತು ನಿಧಾನಗತಿಯಿಂದ ಯಾವುದೇ ಜೀವ ಹಾನಿ ಆದರೆ ನಿರ್ದಾಕ್ಷೀಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ತಂಡಗಳಾಗಿ ಶಂಕಿತ ಪ್ರಕರಣಗಳಿರುವ ಗ್ರಾಮಗಳಿಗೆ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ, ಜನರಿಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಪ್ರತಿ ದಿನ ಡೆಂಗ್ಯೂ ಪ್ರಕರಣಗಳ ಕುರಿತು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿ, ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯತವಾರು ಹಮ್ಮಿಕೊಳ್ಳುವ ಐಇಸಿ ಕಾರ್ಯಕ್ರಮಗಳ ಕುರಿತು ಪಟ್ಟಿ ತಯಾರಿಸಿ, ಸಲ್ಲಿಸಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮತ್ತು ಕೀಟಜನ್ಯ ರೋಗಗಳ ನಿಯಂತ್ರಣದಲ್ಲಿ ಆರೋಗ್ಯ, ಕಂದಾಯ, ಪಂಚಾಯತ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

 

*ವಾರದಲ್ಲಿ ಎರಡು ದಿನ ಡ್ರೈ ಡೆ ಮಾಡಿ:* ಕೀಟಜನ್ಯ ರೋಗಗಳಾದ ಡೆಂಗ್ಯೂ, ಚಿಕನ್‍ಗುನ್ಯಾ ಪ್ರಕರಣಗಳ ನಿಯಂತ್ರಣದಲ್ಲಿ ಡ್ರೈ ಡೆ ಮಾಡುವುದು ಮುಖ್ಯವಾಗಿದೆ. ಗ್ರಾಮದ ನೀರು ಸರಬರಾಜು ವೇಳೆಯನ್ನು ತಿಳಿದುಕೊಂಡು, ನೀರು ಸರಬರಾಜು ಆಗುವ 12 ಗಂಟೆ ಮೊದಲು ನೀರು ಸಂಗ್ರಹಿಸುವ ಪರಿಕರಗಳನ್ನು ಚನ್ನಾಗಿ ತೊಳೆದು, ಒಣ ಅರಿವೆಯಿಂದ ಒರಸಿ ಇಡಬೇಕು. 12 ತಾಸುಗಳ ನಂತರ ನೀರು ಬಂದ ಮೇಲೆ ಮತ್ತೇ ಅವುಗಳಲ್ಲಿ ನೀರು ತುಂಬಬೇಕು. ಅರ್ಧ ಬಳಸಿ, ಉಳಿದ ನೀರಿನಲ್ಲಿ ಮತ್ತೇ ನೀರು ತುಂಬಬಾರದು. ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಯಾವುದೇ ರೀತಿಯ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಪ್ಲಾಸ್ಟಿಕ ಬಾಟಲ್, ಟೈಯರ್ ಮುಂತಾದವುಗಳ ಬಗ್ಗೆ ಜಾಗೃತಿ ವಹಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಅವರು ತಿಳಿಸಿದರು.

 

ಮುಮ್ಮಿಗಟ್ಟಿ ಮನೆಮನೆ ಸಮೀಕ್ಷೆ:

ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತ್ತು ಅವಳಿ ನಗರದ ಕೆಲವು ಶಹರ ಪ್ರದೇಶಗಳಲ್ಲಿ ಜ್ವರ ಪೀಡಿತರಿಂದಾಗಿ ಡೆಂಗ್ಯೂ ಶಂಕಿತರ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅಧಿಕಾರಿಗಳು ಹೆಚ್ಚು ಮುಂಜಾಗ್ರತೆವಹಿಸಿ, ನಿಯಂತ್ರಣಕ್ಕೆ ಕ್ರಮವಹಿಸಬೇಕು.

ಮುಮ್ಮಿಗಟ್ಟಿ, ನರೇಂದ್ರ, ಬೇಲೂರ, ಧಾರವಾಡ ನಗರದ ಆದರ್ಶ ನಗರ, ನೆಹರುನಗರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಮನೆ ಮನೆ ಸಮೀಕ್ಷೆ ಮಾಡಿ, ಆರೋಗ್ಯ ದಾಖಲಾತಿ ಮಾಡಬೇಕು. ಪ್ರತಿ ಮನೆಯಲ್ಲಿ ನೀರು ಸಂಗ್ರಹದ ಕುರಿತು ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಿಶೇಷವಾಗಿ ಮುಮ್ಮಿಗಟ್ಟಿ ಗ್ರಾಮದಲ್ಲಿ ಇರುವ ಸುಮಾರು 3,200 ಮನೆಗಳ ಸರ್ವೆ ಮಾಡಬೇಕು. ಅಂದಾಜು 8 ಸಾವಿರ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಜಂಟಿ ಆಗಿ ಸಮೀಕ್ಷೆ ಮತ್ತು ಐಇಸಿ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್:

ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ಹೆಚ್ಚಳವಾದರೆ, ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ತಕ್ಷಣ ಸ್ಪಂದಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು, ಚಿಕಿತ್ಸೆಗಾಗಿ ಬೆಡ್‍ಗಳನ್ನು ಮೀಸಲಿಡಬೇಕೆಂದು ಜಿಲ್ಲಾಧಿಕಾರಿಗಳು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರಿಗೆ ಸೂಚನೆ ನೀಡಿದರು.

ಕಳೆದ ಜನವರಿಯಿಂದ ಜಿಲ್ಲೆಯಲ್ಲಿ 150 ಪಾಜಿಟಿವ್ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಎಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಿ, ಗುಣಮುಖರಾಗಿರುತ್ತಾರೆ. ಮುಮ್ಮಿಗಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುಮಾರು 8 ಡೆಂಗ್ಯೂ ಶಂಕಿತ ಪ್ರಕರಣಗಳು ಕಂಡುಬಂದಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಒಂದು ಪ್ರಕರಣದಲ್ಲಿ ನಾಲ್ಕು ವರ್ಷದ ಹೆಣ್ಣುಮಗು ಡೆಂಗ್ಯೂ ಶಂಕಿತ ಕಾಯಿಲೆಯಿಂದ ಜೂ. 11 ರಂದು ಮರಣ ಹೊಂದಿದ್ದು, ಈ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ಸಭೆಯಲ್ಲಿ ತಿಳಿಸಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಆರ್.ಸಿ.ಎಚ್.ಓ ಅಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಪರುಶರಾಮ ಎಫ್.ಕೆ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ತಹಸಿಲ್ದಾರಗಳಾದ ಬಸವರಾಜ ಬೆಣ್ಣಿಶಿರೂರ, ಪ್ರಕಾಶ ನಾಶಿ, ಸುಧೀರ ಸಾಹುಕಾರ, ಯಲ್ಲಪ್ಪ ಗೊಣೆನ್ನವರ, ಡಾ.ಡಿ.ಎಚ್.ಹೂಗಾರ, ಮಲೇರಿಯಾ ಕಾರ್ಯಕ್ರಮ ಅಧಿಕಾರಿ ಡಾ.ಮಂಜುನಾಥ ಸೊಪ್ಪಿಮಠ, ದಾರವಾಡ ತಾಲೂಕು ಪಂಚಾಯತ ಇಓ ಗಂಗಾಧರ ಕಂದಕೂರ ಸೇರಿದಂತೆ ಎಲ್ಲ ತಾಲೂಕು ಪಂಚಾಯತ ಇಓಗಳು, ಡಾ.ತನುಜಾ ಕೆ.ಎನ್., ಸೇರಿದಂತೆ ಎಲ್ಲ ತಾಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here