ಧಾರವಾಡ ಜೂನ್.10:
ಧಾರವಾಡದ ಕುಮಾರೇಶ್ವರ ಕಾಲನಿ ನಿವಾಸಿ ಮಲ್ಲಿಕಾರ್ಜುನ ದಂಡಿನ್ ನಿವೃತ್ತ ಪೋಲಿಸ್ ಅಧೀಕ್ಷಕರು ಸ್ಥಳೀಯ ಟಿಕಾರೆರಸ್ತೆಯಲ್ಲಿರುವ ಧಾರವಾಡ ಪ್ಲಾಜಾದಲ್ಲಿನ ಸಿ.ಟಿ. ಮೊಬೈಲ್ಸ್‍ನಿಂದ ದಿ:17/02/2023 ರಂದು ಸ್ಯಾಮ್‍ಸಂಗ್‍ಗ್ಯಾಲಕ್ಸಿ ಮೊಬೈಲ್‍ನ್ನು ರೂ.10,000/-ಗಳಿಗೆ ಖರೀದಿಸಿದ್ದರು. ಮೊಬೈಲ್ ಖರೀದಿಸಿದ ಕಲವೇ ದಿನಗಳಲ್ಲಿ ಅದರಲ್ಲಿ ಸಮಸ್ಯೆ ಕಂಡು ಬಂದು ಅದು ಚಾರ್ಜ ಆಗಲು 5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಅದರ ಬ್ಯಾಟರಿ ಬೇಗನೆ ಇಳಿಮುಖವಾಗುತ್ತಿತ್ತು. ಸದರಿ ವಿಷಯವನ್ನು ಎದುರುದಾರ ನಂ.1ನೇದವರಾದ ಸಿ.ಟಿ. ಮೊಬೈಲ್‍ರವರಿಗೆ ತಿಳಿಸಿದರೂ ಅವರಾಗಲೀ ಅಥವಾ ಆ ಮೊಬೈಲ್‍ನ ಉತ್ಪಾದಕರಾಗಲೀ/ ಸರ್ವಿಸ್ ಸೆಂಟರನವರಾಗಲೀ ಆ ದೋಷವನ್ನು ಸರಿಪಡಿಸಿಕೊಡದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಹೇಳಿ ಎದುರುದಾರ ಸಿ.ಟಿ. ಮೊಬೈಲ್ ಹಾಗೂ ಉತ್ಪಾದಕರಾದ ಸ್ಯಾಮ್ ಸಂಗ್ ಕಂಪನಿ ಮತ್ತು ಸರ್ವಿಸ್ ಸೆಂಟರ್‍ನವರ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:27/04/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ, ಎದುರುದಾರರು ದೂರುದಾರರಿಂದ ರೂ.10,000/- ಗಳಿಗೆ ಸ್ಯಾಮ್ ಸಂಗ್ ಮೊಬೈಲ್ ಮಾರಾಟ ಮಾಡಿ ಅದರಲ್ಲಿ ದೋಷ ಉಂಟಾದಾಗ ಅದನ್ನು ಸರಿಪಡಿಸಿಕೊಡುವುದು ಅವರ ಕರ್ತವ್ಯವಾಗಿತ್ತು. ಆದರೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎದುರುದಾರ ನಂ.1 ರಿಂದ 3ನೇ ದವರು ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿ ಸಿ.ಟಿ. ಮೊಬೈಲ್ ಹಾಗೂ ಸರ್ವಿಸ್ ಸೆಂಟರ್ ಮತ್ತು ಉತ್ಪಾದಕ ಸ್ಯಾಮ್ ಸಂಗ್ ಕಂಪನಿ ರವರು ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ಮೊಬೈಲ್ ದುರಸ್ತಿ ಮಾಡಿಕೊಡಬೇಕು ತಪ್ಪಿದ್ದಲ್ಲಿ ಹಳೆಯ ಮೊಬೈಲ್ ಬದಲಿಸಿ ಹೊಸ ಮೊಬೈಲ್‍ಕೊಡಬೇಕು ಅಂತಾ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/-ಗಳ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000/- ಗಳನ್ನು ಎದುರುದಾರ ನಂ.1 ರಿಂದ 3 ರವರು ಜಂಟಿಯಾಗಿ ಕೊಡಲು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.