ಬೆಂಗಳೂರು ನಗರ ಜಿಲ್ಲೆ, ಮೇ 31:
ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ರೈತರಿಗೆ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಕೆ.ಎ. ದಯಾನಂದ ಸೂಚಿಸಿದರು.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವತಿಯಿಂದ “ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವ ಸಲುವಾಗಿ” ಕರೆಯಲಾಗಿದ್ದ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟ ನಾಶಕಗಳನ್ನು ಗುಣನಿಯಂತ್ರಣಕ್ಕೆ ಒಳಪಡಿಸುವುದರ ಜೊತೆಗೆ ರಸಗೊಬ್ಬರ ತಯಾರಕರೊಂದಿಗೆ ಚರ್ಚಿಸಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲು ಕ್ರಮವಹಿಸಿ ಹಾಗೂ ಕೀಟನಾಶಕಗಳ ಸುರಕ್ಷಿತ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಲಲಿತಾ ರೆಡ್ಡಿ ಸೇರಿದಂತೆ ರಸಗೊಬ್ಬರ ತಯಾರಾಕ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.