Views: 1
ವಯನಾಡ್ ನಲ್ಲಿನ ಸಂತ್ರಸ್ತರಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ದಿನಸಿ ಸಾಮಾಗ್ರಿಗಳು ಮತ್ತು ಅಗತ್ಯ ವಸ್ತುಗಳ ತಲುಪಿಸುವ 2 ಟ್ರಕ್‌ಗಳಿಗೆ ಚಾಲನೆ:
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಕೇರಳದ ವಯನಾಡ್ ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ತಲುಪಿಸುವ 2 ಟ್ರಕ್‌ಗಳಿಗೆ *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್* ರವರು ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮುಖ್ಯ ಆಯುಕ್ತರು ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದ ವಯಾನಾಡ್ ನಲ್ಲಿ ಆಗಿರುವ ದುರಂತದಿಂದ ಸಾಕಷ್ಟು ನಷ್ಟವುಂಟಾಗಿದ್ದು, ಆ ಸಮಸ್ಯೆಗೆ ಎಲ್ಲಾ ಕಡೆಯಿಂದ ಸ್ಪಂದಿಸಿ ನೆರವು ನೀಡುತ್ತಿದ್ದಾರೆ ಎಂದರು.
ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ಬಿಬಿಎಂಪಿ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಯನಾಡ್ ದುರಂತದಲ್ಲಿ ಪಾಲಿಕೆ ನೌಕರರ ಸಂಘವು 2 ಟ್ರಕ್‌ಗಳಲ್ಲಿ 25 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ವಯನಾಡ್ ದುರಂತವು ನೋವಿನ ಸಂಗತಿಯಾಗಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ಅಧಿಕಾರಿಗಳ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾದ *ಅಮೃತ್ ರಾಜ್* ರವರು ಮಾತನಾಡಿ, ಕೇರಳ ವಯನಾಡ್ ನಲ್ಲಿ ಮಳೆ ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ ಎಂದು ಹೇಳಿದರು.
ಬಿಬಿಎಂಪಿ ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಪಾಲಿಕೆಯ ಅಧಿಕಾರಿ/ನೌಕರರಿಂದ ಆರ್ಥಿಕ ನೆರವಿನಿಂದ ದಿನಸಿ ಸಾಮಗ್ರಿಗಳಾದ ರವೆ, ಎಣ್ಣಿ, ಅಕ್ಕಿ, ಗೋದಿ, ಸಕ್ಕರೆ ಹಾಗೂ ದಿನ ನಿತ್ಯ ಬಳಕೆಯ ವಸ್ತುಗಳಾದ ಹಾಸಿಗೆ, ದಿಂಬು, ಬೆಡ್ ಶಿಟ್, ಸ್ವೆಟರ್, ಜರ್ಕಿನ್ ಸೇರಿದಂತೆ ಸುಮಾರು 11 ಟನ್ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ದಿನಸಿ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳ ಟ್ರಕ್‌ಗಳ ಜೊತೆಗೆ 20ಕ್ಕೂ ಹೆಚ್ಚು ಅಧಿಕಾರಿ/ನೌಕರರು ವಯನಾಡ್ ಗೆ ತೆರಳಿದ್ದು, ಸಂತ್ರಸ್ತರಿಗೆ ಎಲ್ಲಾ ಸಾಮಗ್ರಿಗಳನ್ನು ಹಸ್ತಾಂತರ ಮಾಡಿ ಹಿಂತಿರುಗಲಿದ್ದಾರೆ.