ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ | ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರದ ತಡೆ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಡೆ ಒಡ್ಡಿದೆ. ‘ಕಿಸಾನ್ ಸತ್ಯಾಗ್ರಹ’ ಮಾತ್ರವಲ್ಲದೆ, ಉಕ್ರೇನ್ ಹಾಗೂ ಇಸ್ರೇಲ್‌ನ ಯುದ್ಧಕ್ಕೆ ಸಂಬಂಧಿಸಿದ ಆ ದೇಶಗಳದ್ದೇ ಆದ ಎರಡು ಸಿನಿಮಾಗಳ ಪ್ರದರ್ಶನಕ್ಕೂ ತಡೆ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಮೂರು ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿಲ್ಲ ಎಂಬ ಕಾರಣ ನೀಡಿ, ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಚಲನಚಿತ್ರೋತ್ಸವದಲ್ಲಿ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಪಡೆಯದ ಸಿನಿಮಾಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂಬ ಯಾವುದೇ ನಿಯಮಗಳಿಲ್ಲ ಎಂದು ‘ಕಿಸಾನ್ ಸತ್ಯಾಗ್ರಹ’ ಸಿನಿಮಾದ ನಿರ್ದೇಶಕ ಕೇಸರಿ ಹರವೂ ಹೇಳಿದ್ದಾರೆ.
“ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಪಟ್ಟಿಯಲ್ಲಿ ‘ಕಿಸಾನ್ ಸತ್ಯಾಗ್ರಹ’ ಚಲನಚಿತ್ರವನ್ನೂ ರಾಜ್ಯ ಸರ್ಕಾರ ಒಳಗೊಂಡಿತ್ತು. ಆದರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ನಮ್ಮ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ನೀಡಿದೆ. ಸರ್ಕಾರದ ವಿರುದ್ಧ ಇರುವ ಕಾರಣಕ್ಕಾಗಿ ತಡೆ ನೀಡಿರಬಹುದು” ಎಂದು ಅವರು ಹೇಳಿದ್ದಾರೆ.
“ಕಳೆದ ವರ್ಷ ನಡೆದಿದ್ದ ಚಲನಚಿತ್ರೋತ್ಸವದಲ್ಲಿ ‘ಕಿಸಾನ್ ಸತ್ಯಾಗ್ರಹ’ ಸಾಕ್ಯಚಿತ್ರ ಪ್ರದರ್ಶನಗೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಸರ್ಕಾರವಿದ್ದ ಕಾರಣ ಚಿತ್ರವನ್ನು ಪಟ್ಟಿಗೇ ಸೇರಿಸಿರಲಿಲ್ಲ. ಈ ವರ್ಷ ಪ್ರದರ್ಶನವಾಗುತ್ತದೆ ಎಂಬ ಭರವಸೆ ಇತ್ತು. ಆದರೆ, ಕೇಂದ್ರ ತಡೆಯೊಡ್ಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2020ರಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಗಳ ಕಾಲ ನಡೆದ ರೈತ ಹೋರಾಟದ ದೃಶ್ಯಗಳನ್ನು ಸೆರೆಹಿಡಿದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರ್ದೇಶಕ ಕೇಸರಿ ಹರವೂ ಅವರು ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಾಚಿತ್ರ ನಿರ್ಮಾಣ ಮಾಡಿದ್ದರು. 90 ನಿಮಿಷಗಳ ಕಾಲ ಇರುವ ಸಾಕ್ಷ್ಯಾಚಿತ್ರವು, ದೆಹಲಿಯ ರೈತ ಹೋರಾಟದ ಜೊತೆಗೆ, ಕೃಷಿ ಕಾಯ್ದೆಯ ಸಾಧಕ–ಬಾಧಕಗಳನ್ನು ಅವಲೋಕಿಸುವ ಪ್ರಯತ್ನ ಮಾಡಿತ್ತು.