Views: 2
ಬೆoಗಳೂರು ಆಗಸ್ಟ್ 15
ಸರ್ವರಿಗೂ ಸಮಾನ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ತಿಳಿಸಿದರು
ಅವರು ಇಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾದ 78 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಇಂದು ನಾವು ಸ್ಮರಿಸಬೇಕು. ಹಾಗೆಯೇ ದೊರೆತ ಸ್ವಾತಂತ್ರ‍್ಯ ನಮ್ಮಗಳ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಜನರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು .ಇಂದು ತ್ವರಿತವಾಗಿ ಜನರಿಗೆ ನ್ಯಾಯ ಕೊಡಿಸುವಲ್ಲಿ ಲೋಕ್ ಅದಾಲತ್, ಮಧ್ಯಸ್ಥಿಕೆ ಮುಂತಾದ ನ್ಯಾಯಾಂಗದ ಕಾರ್ಯಕ್ರಮಗಳು ಯಶಸ್ಸುಗಳಿಸಿದೆ.ತಂತ್ರಜ್ಞಾನದ ಕ್ರಾಂತಿಯಿoದಾಗಿ ಇ- ಸೇವಾ ಕೇಂದ್ರ ಮತ್ತು ವರ್ಚುವಲ್ ಕೋರ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಇವು ಹೆಚ್ಚು ಜನಸ್ನೇಹಿಯಾಗಿವೆ. ಮುಂದುವರೆದು ಕಾಗದ ಮುಕ್ತ ನ್ಯಾಯಾಲಯ ಮಾಡುವ ಗುರಿ ಹೊಂದಲಾಗಿದೆ ಎಂದರು
ರಾಜ್ಯದಲ್ಲಿ ನಡೆಸಲಾಗುತ್ತಿರುವ ಲೋಕ್ ಅದಾಲತ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ನ್ಯಾಯಾಲಯದ ಸಮಯ ಉಳಿತಾಯದ ಜೊತೆಗೆ ತ್ವರಿತವಾಗಿ ಜನರಿಗೆ ನ್ಯಾಯ ದೊರಕಿಸಿದಂತಾಗಿದೆ ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಮುಂಬಡ್ತಿ ನೀಡಲಾಗುತ್ತಿದೆ. ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಲವು ಕಾರ್ಯಕ್ರಮ ತರಬೇತಿಗಳನ್ನು ಆಯೋಜಿಸುತ್ತಿದೆ. ನಗರದ ಕಾವೇರಿ ಭವನದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಹೆಚ್ಚುವರಿ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ದೊರೆಯುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಹಿರಿದಾಗಿದ್ದು, ಆ ನಿಟ್ಟಿನಲ್ಲಿ ಪರಸ್ಪರ ನಂಬಿಕೆ, ಹೊಸ ಆಲೋಚನೆ ಹಾಗೂ ದೂರದೃಷ್ಟಿಕೋನದಿಂದ ನ್ಯಾಯಾಂಗ ಮುಂದೆ ಸಾಗಬೇಕಿದೆ ಎಂದರು.
ಸಮಾರಂಭದಲ್ಲಿ ಉಚ್ಚನ್ಯಾಯಾಲಯದ ಇತರ ನ್ಯಾಯಮೂರ್ತಿಗಳು, ಹೆಚ್ಚುವರಿ ಸಾಲಿಸಿಟರ್ ಜನರಲ್ ಅಡ್ವಕೋಟ್ ಜನರಲ್, ವಕೀಲರ ಸಂಘದ ಅಧ್ಯಕ್ಷರು, ಹಿರಿಯ ವಕೀಲರು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಮಹಾನುಭಾವರನ್ನು ಸ್ಮರಿಸೋಣ – ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು ಆಗಸ್ಟ್ 15
ಭಾರತದ ಸ್ವಾತಂತ್ರ್ಯ
ಕ್ಕಾಗಿ ಹೋರಾಟ ನಡೆಸಿ ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಮಹಾನುಭಾವರನ್ನು ಸ್ಮರಿಸೋಣ. ಗಡಿಭಾಗದಲ್ಲಿ ಯೋಧರು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ಗೌರವ ಸಲ್ಲಿಸೋಣ. ನಮ್ಮನ್ನು ರಕ್ಷಿಸುವವರಿಗೆ ನಾವು ಸಹಕಾರ ನೀಡೋಣ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನ ಮುಂಭಾಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ವೈಭವೋಪೇತ ಮೆಟ್ಟಿಲುಗಳ ಬಳಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ನಂತರ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಭಾಪತಿಗಳು ಮಹಾತ್ಮ ಗಾಂಧಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ನೇತಾಜಿ ಸುಭಾಸ ಚಂದ್ರ ಬೋಸ್, ಲೋಕಮಾನ್ಯ ಬಾಲಗಂಗಾಧರ ತಿಲಕ ಸೇರಿದಂತೆ ಸಹಸ್ರಾರು ಜನರ ತ್ಯಾಗ, ಬಲಿದಾನ, ಅವಿರತ ಶ್ರಮದ ಫಲವಾಗಿ ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ನಾವೆಲ್ಲರೂ ದೇಶದ ಬಗ್ಗೆ ಸಮರ್ಪಣಾ ಮನೋಭಾವ ಹಾಗೂ ದೇಶ ಭಕ್ತಿಯ ಜಾಗ್ರತೆಗಾಗಿ ನಮ್ಮ ನಮ್ಮ ಕ್ಷೇತ್ರಗಳಲ್ಲಿಯೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ. ಅಸಂಖ್ಯಾತ ಬಾಂಧವರ ಬಲಿದಾನದ ಕಾರಣದಿಂದ ನಾವು ಇಂದು ಸ್ವತಂತ್ರವನ್ನು ಪಡೆದಿದ್ದೇವೆ ಎಂದು ತಿಳಿಸಿದರು.
ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಘನತೆ, ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಎಲ್ಲ ಹಂತದ ಜನ ಪ್ರತಿನಿಧಿಗಳು, ಸಮಾಜ ಸೇವಕರು ಚಿಂತನೆ ನಡೆಸುವ ಮೂಲಕ ಸಂಸದೀಯ ವ್ಯವಸ್ಥೆಯಲ್ಲಿ ಸತ್ಸಂಪ್ರದಾಯ ಬೆಳೆಸುವತ್ತ ಗಮನ ಹರಿಸಬೇಕಿದೆ ತಿಳಿಸಿದರು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿoದ ಆಚರಿಸುತ್ತಿದ್ದೇವೆ. ಸಂಭ್ರದ ಹಿಂದೆ ಸಂಘರ್ಷ, ತ್ಯಾಗ, ಬಲಿದಾನವಿದೆ. ನಮ್ಮ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ನಾವು ನಮಸ್ಕರಿಸಬೇಕು ಎಂದು ತಿಳಿಸಿದರು.
ಜಾತಿ, ಧರ್ಮ, ಭಾಷೆ, ಪ್ರಾಂತೀಯ, ಮೀಸಲಾತಿ, ನೀರಿಗಾಗಿ ಸಂಘರ್ಷವಿದೆ. ನಾವು ಈ ಬಗ್ಗೆ ಅವಲೋಕಿಸಬೇಕಾಗಿದೆ. ವಿಕಸಿತ ಭಾರತದ ಕಲ್ಪನೆ ಬಗ್ಗೆ ಯೊಚನೆ ಮಾಡುತ್ತಿದ್ದೇವೆ. ನಮ್ಮ ದೇಶವು ಮುಂದುವರೆಯುತ್ತಿದೆ. ಬೇರೆ ದೇಶದವರ ವಕ್ರದೃಷ್ಟಿ ನಮ್ಮ ದೇಶದ ಮೇಲಿದೆ. ನಮ್ಮ ದೇಶದ ಸುಭದ್ರತೆಯನ್ನು ಕಾಪಾಡಬೇಕು. ಜಾತಿ, ಧರ್ಮ, ಮರೆತು ಎಲ್ಲರೂ ಒಗ್ಗಟ್ಟಾದಾಗ ದೇಶದ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಅನೇಕ ಮಹಾನುಭಾವರ ತ್ಯಾಗ, ಬಲಿದಾನದಿಂದ ಬಂದಿದೆ. ಆದರೆ ಸ್ವಾತಂತ್ರ್ಯದ ನಂತರ ನಾಗರೀಕ ಸಮಾಜವು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನಾಗರೀಕ ಸಮಾಜವು ಸ್ವಾರ್ಥದಿಂದ ಕೂಡಿದರೆ ದೇಶ ಉಳಿಯುವುದಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ನಮ್ಮ ದೇಶವು ಬಲಿಷ್ಟವಾಗಬೇಕು. ಎಲ್ಲರೂ ಈ ದಿಸೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
ಮಾಜಿ ಸೈನಿಕ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಮಾತನಾಡಿ ಕಾರ್ಗಿಲ್ ಯುದ್ದದ ಸಂದರ್ಭದಲ್ಲಿನ ಅವರ ಅನುಭವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಕ್ಯಾಪ್ಟನ್ ನವೀನ್ ನಾಗಪ್ಪ, ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯದರ್ಶಿ ಶ್ರೀಮತಿ ಕೆ.ಆರ್.ಮಹಾಲಕ್ಷ್ಮಿ, ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ , ಸಭಾಪತಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ್ ವಾಳ್ವೆಕರ್, ಶಾಸಕರು, ಹಿರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.