ಬೆಂಗಳೂರು, ಜುಲೈ 03
ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಶುದ್ಧ ನೀರು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿÀಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ 2024 “ಭೂ ಪುನಶ್ಚೇತನ, ಬರ ನಿರ್ವಹಣೆ ಮತ್ತು ಬರಡುಭೂಮಿ ಚೇತರಿಕೆ” ಹಾಗೂ ವನ ಮಹೋತ್ಸವ-2024ರ ಕಾರ್ಯಕ್ರಮವನ್ನು ಶ್ರೀಗಂಧದ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೆಲವು ಸಾರಿ ಕಲುಷಿತ ನೀರು ಕುಡಿದು ಅನೇಕ ಜನರು ಸಾವನ್ನಪ್ಪಿರುವ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಶುದ್ಧ ನೀರು ಒದಗಿಸುವಂತೆ ಸೂಚಿಸಲಾಗಿದೆ. ಶುದ್ಧ ನೀರು ಪೂರೈಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಸರ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು ನಾಡಿನಾದ್ಯಂತ ಜೂನ್ 05 ರಂದು ಪರಿಸರ ದಿನಾಚರಣೆ ಆಚರಿಸಲಾಗುವುದು. ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಇಂದು ಆಚರಿಸಲಾಗುತ್ತಿದೆ ಎಂದ ಮುಖ್ಯಮಂತ್ರಿಗಳು, ಪ್ರತಿಯೊಬ್ಬರು ಪರಿಸರದ ಬಗ್ಗೆ ಅರ್ಥ ಮಾಡಿಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಣಣೆ ಏಕೆ ಮಾಡಬೇಕು? ಅದರಿಂದ ಸಮಾಜಕ್ಕಾಗುವ ಲಾಭಗಳೇನು? ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕಾಡಿನ ಬಗ್ಗೆ ಪ್ರಾಣಿಸಂಕುಲದ ಬಗ್ಗೆ ಅವರಿಗೆ ಗೊತ್ತಾಗಬೇಕು. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಸಂರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಭೂಮಿಯ ಮೇಲೆ ಬದುಕುವ ನಾವು ನಿಸರ್ಗವನ್ನು ಪ್ರೀತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. 20 ವರ್ಷಗಳಿಂದ ಪ್ರವಾಹ, ಬರಗಾಲ ಬರುತ್ತಿದ್ದು ಇದನ್ನು ಅರ್ಥ ಮಾಡಿಕೊಂಡು ಒಂದು ಮರ ಕಡಿದರೆ, ಇನ್ನೊಂದು ಸಸಿ ನೆಡುವ ಮೂಲಕ ಮರ ಬೆಳೆಸಬೇಕು. ಇದರಿಂದ ಪರಿಸರ ಸಂರಕ್ಷಣೆ, ಪಕ್ಷಿ ಸಂಕುಲಗಳ ಸಂರಕ್ಷಣೆ ಹಾಗೂ ಕಲುಷಿತ ವಾತಾವರಣವನ್ನು ಶುದ್ಧ ಮಾಡಲು ಸಾಧ್ಯವಾಗುತ್ತದೆ ಎಂದರು.
ಸೊಳ್ಳೆ ಕಡಿತದಿಂದ ಅನೇಕ ಕಡೆ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಹೆಚ್ಚು ಬರುವುದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇದನ್ನು ತಡೆಗಟ್ಟಲು ಈಗಾಗಲೇ ಸಭೆ ಕರೆದು ಚರ್ಚಿಸಲಾಗಿದ್ದು, ಆರೋಗ್ಯ ಇಲಾಖೆ, ಪೌರಾಡಳಿತ, ನಗರಪಾಲಿಕೆಯ ಜೊತೆಗೆ ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಬೇಕು. ಸಾರ್ವಜನಿಕರ ಸಹಕಾರ ಇಲ್ಲದೆ ಡೆಂಗ್ಯೂ ನಿರ್ಮೂಲನೆ ಸಾಧ್ಯ ಇಲ್ಲ. ನೈರ್ಮಲ್ಯ ಕಾಪಾಡಿದರೆ, ಉತ್ತಮ ಆರೋಗ್ಯ ಕಾಪಾಡಿದಂತೆ, ಉತ್ತಮ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರ ದಿನಾಚರಣೆ ಆಚರಿಸಿ, ಸುಮ್ಮನಾಗಬಾರದು. ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಸಂಶೋಧನೆ ಸರಿದಾರಿಯಲ್ಲಿ ನಡೆಯಬೇಕು. ಹೆಚ್ಚು ಹೆಚ್ಚು ಸಂಶೋಧನ ಕೇಂದ್ರಗಳಾಬೇಕು ಎಂದರು.
ಇದೇ ಸಂದರ್ಭದಲ್ಲಿ ಪರಿಸರ ಕುರಿತ ಮೇಳಗಳನ್ನು ವೀಕ್ಷಿಸಿದರು. ರಾಜ್ಯ ಪರಿಸರ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ಪರಿಸರ ಕುರಿತು ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು ಹಾಗೂ ಎಲ್ಲಾ ಮಕ್ಕಳ ಪರವಾಗಿ ವಿದ್ಯಾರ್ಥಿನಿಯೊಬ್ಬರು ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಮುಖ್ಯಮಂತ್ರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿದರು.
ಅರಣ್ಯ, ಜೀವಿಪರಿಸ್ಥಿತಿ ಮತ್ತು ಮರಿಸರ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಅವರು ಪ್ರಾಸ್ತಾವಿಕ ಮಾತನಾಡಿ, ಪರಿಸರಕ್ಕೆ ಪೂರಕವಾದ ಮರ-ಗಿಡಗಳನ್ನು ಬೆಳೆಸಿ ಸಂರಕ್ಷಿಸಬೇಕು. ಪ್ರತಿ ವರ್ಷ ಅರಣ್ಯ ಇಲಾಖಾ ವತಿಯಿಂದ 5 ಕೋಟಿ ಸಸಿ ನೆಡಲಾಗುವುದು. ಮುಂದಿನ ವರ್ಷದಿಂದ 10 ಕೋಟಿ ಸಸಿ ನೆಡುವ ಪ್ರಯತ್ನ ಮಾಡಲಾಗುವುದು. ಮನೆಗೊಂದು ಸಸಿ ನೆಡಬೇಕು. ಸಸಿ ನೆಡುವುದರ ಜೊತೆಗೆ ಅದರ ಪಾಲನೆ-ಪೋಷಣೆ ಮಾಡಬೇಕು. ಆಮ್ಲಜನಕದ ಕೊರತೆಯಿಂದ ಅನೇಕರು ಸಾವಿಗೀಡಾಗಿರುವುದನ್ನು ನಾವು ಕಂಡಿದ್ದೇವೆ. ಆದ್ದರಿಂದ ಪರಿಸರ ಸಂರಕ್ಷಣೆ ಜೊತೆಗೆ, ವನ್ಯ ಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಹಿಂದಿನ ಜನರು ನೈಸರ್ಗಿಕ ಸಂಪತ್ತನ್ನು ಹಿತ-ಮಿತವಾಗಿ ಬಳಸುತ್ತಿದ್ದರು. ಆದರೆ ಈಗಿನ ಜನರು ಐಷರಾಮಿ ಜೀವನಕ್ಕಾಗಿ ಮರ ಕಡಿಯುತ್ತಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಬೇಕು. ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಮರಿಸ್ವಾಮಿಗೌಡ, ಡಾ.ಪ್ರದೀಪ್.ಸಿ, ಶರಣ್‍ಕುಮಾರ್ ಎಂ.ಮೋದಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮುಂಜುನಾಥ್ ಪ್ರಸಾದ್, ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‍ಕುಮಾರ್ ದೀಕ್ಷಿತ್, ಜೀವಿ ಪರಿಸ್ಥಿತಿ ಮತ್ತು ಪರಿಸರ ಪ್ರಾಧಾನ ಕಾರ್ಯದರ್ಶಿ ಬಿ.ಪಿ.ರವಿ, ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ರೇ ಹಾಗೂ ಪರಿಸರವಾದಿಗಳು ಮತ್ತು ವಸತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.