ಧಾರವಾಡ ಜೂನ್.05:
ಪ್ರಸಕ್ತ 2024-25 ನೇ ಸಾಲಿಗೆ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನಾ ಗುರಿಯನ್ನು ರೂ. 20,053.53 ಕೋಟಿ ನಿಗಧಿಪಡಿಸಿದ್ದು, ಜಿಲ್ಲೆಯ ಎಲ್ಲ ಬ್ಯಾಂಕುಗಳ ಪ್ರತಿ ಶಾಖೆಗೆ ಗುರಿ ನಿಗಧಿಪಡಿಸಲಾಗಿದ್ದು, ಕಾಲಮಿತಿಯಲ್ಲಿ ಪೂರ್ಣ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾರ್ಚ 2024 ರ ಅಂತ್ಯಕ್ಕೆ ಪ್ರಗತಿ ಸಾಧನೆ ಕುರಿತು ಮತ್ತು ಪ್ರಸಕ್ತ ಸಾಲಿನ ವಾರ್ಷಿಕ ವಿತ್ತೀಯ ಯೋಜನೆ ಬಿಡುಗಡೆ ನಿಮಿತ್ಯ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಮತ್ತು ಜಿಲ್ಲಾ ಬ್ಯಾಂಕರ್ಸ್ ಸಲಹಾ ಸಮಿತಿ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮನ್ವಯ ಸಮಿತಿ ಮುಖ್ಯವಾಗಿದೆ. ಇಲಾಖೆಗಳ ಮತ್ತು ಬ್ಯಾಂಕರ್ಸ್‍ಗಳ ಮಧ್ಯ ಸಮನ್ವಯ ಮೂಡಿಸಲು ಈ ಸಮಿತಿ ಸಹಾಯಕವಾಗಿದೆ. ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕಗಳು ಸಹಕಾರ ನೀಡಿ, ಕೈಜೊಡಿಸಬೇಕೆಂದು ಅವರು ತಿಳಿಸಿದರು.
ಜಿಲ್ಲೆಯ ಪ್ರಸಕ್ತ ವಾರ್ಷಿಕ ವಿತ್ತೀಯ ಯೋಜನೆಯಲ್ಲಿ ಬೆಳೆಸಾಲ ರೂ. 2003.74 ಕೋಟಿ, ಕೃಷಿ ಅವಧಿ ಸಾಲ ರೂ.1,223.11 ಕೋಟಿ ಸೂಕ್ಷ್ಮ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲ ರೂ. 8,096.24, ಇತರೆ ಆಧ್ಯತಾ ವಲಯ ರೂ.774.50 ಕೋಟಿ ಮತ್ತು ಆಧ್ಯತಾ ರಹಿತ ವಲಯಕ್ಕೆ ಸಾಲ ರೂ.7,341.77 ಕೋಟಿ ಸೇರಿದಂತೆ ಒಟ್ಟು ರೂ.20,053.53 ಕೋಟಿಗಳ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದು ಸಿಇಓ ಸ್ವರೂಪ ಟಿ.ಕೆ., ಅವರು ತಿಳಿಸಿದರು.
ಜಿಲ್ಲಾ ಅಗ್ರಣೀಯ ಬ್ಯಾಂಕ ಜಿಲ್ಲಾ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಎಪ್ರೀಲ್ 1, 2023 ರಿಂದ ಮಾರ್ಚ 2024 ರ ಅಂತ್ಯದವರೆಗೆ ನಿಗದಿತ ಗುರಿಯಾಗಿದ್ದ ರೂ. 14,580.46 ಕೋಟಿಗಳಿಗೆ ರೂ. 19,560.73 ಕೋಟಿ ಸಾಲ ವಿತರಿಸಿ ಶೇ. 134 ರಷ್ಟು ಹೆಚ್ಚುವರಿ ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು. 2023-24 ನೇ ಸಾಲಿನ ವಾರ್ಷಿಕ ಸಾಲದ ಯೋಜನೆಯ ಮುಖ್ಯಾಂಶಗಳನ್ನು ಮತ್ತು ಮಾರ್ಚ 2024 ರ ತ್ರೈಮಾಸಿಕ ಅಂತ್ಯದ ಪ್ರಗತಿಯನ್ನು ವಿವರಿಸಿದರು.
ಆರ್.ಬಿ.ಐ ಅಧಿಕಾರಿ ಅರುಣಕುಮಾರ ಪಿ. ಅವರು ಮಾತನಾಡಿ, ಆರ್.ಬಿ.ಐ ನ ಮಾರ್ಗಸೂಚಿ ಮತ್ತು ನೀತಿಯನ್ನು ವಿವರಿಸಿದರು. ಗ್ರಾಹಕರಿಗೆ ಅನೌಪಚಾರಿಕ ಮೂಲಗಳಿಂದ ಪಡೆದಂತ ಸಾಲಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿ ಔಪಚಾರಿಕ ಮೂಲಗಳಿಂದ ಸಾಲ ಪಡೆಯಲು ಗ್ರಾಹಕರನ್ನು ಪ್ರೋತ್ಸಾಹಿಸಬೇಕೆಂದು ಬ್ಯಾಂಕಿನ ಅಧಿಕಾರಿಗಳಿಗೆ ಸಲಹೆ ನೀಡಿದರು. ಯುಪಿಐ ನಿಂದ ಹಣಕಾಸಿನ ವ್ಯವಹಾರಗಳನ್ನು ತುಂಬಾ ಎಚ್ಚರಿಕೆಯಿಂದ ನಡೆಸಲು ಹಾಗೂ ಸೈಬರ ವಂಚನೆ, ಸೈಬರ್ ಅಪರಾಧಗಳನ್ನು ವರದಿ ಮಾಡಲು ಸ್ಥಾಪಿಸಿರುವಂತೆ ಸಹಾಯವಾಣಿ 1930 ಬಗ್ಗೆ ಹೆಚ್ಚಿನ ಪ್ರಸಾರ ಮಾಡಲು ಅವರು ತಿಳಿಸಿದರು.
ನಬಾರ್ಡ್ ಬ್ಯಾಂಕನ ಡಿಡಿಎಂ ಮಯೂರ ಕಾಂಬಳೆ ಅವರು ಮಾತನಾಡಿದರು. ಬ್ಯಾಂಕ್ ಆಪ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕಗಳ ಮುಖ್ಯಸ್ಥರು, ಪ್ರತಿನಿಧಿಗಳು, ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳ ಭಾಗವಹಿಸಿದ್ದರು.