Views: 0
ಶಿವಮೊಗ್ಗ, ಮೇ -30:
ಜಿಲ್ಲೆಯಲ್ಲಿ ಜೂನ್ 03 ರಂದು ನಡೆಯುವ ಕರ್ನಾಟಕ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024 ರ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಮತಗಟ್ಟೆಗಳ ಸುತ್ತಲೂ 200 ಮೀ ಪರಿಮಿತಿಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂ-01 ರ ಸಂಜೆ 4 ರಿಂದ ಜೂ-03 ರ ಸಂಜೆ 4.00 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರನ್ನು ಹೊರತುಪಡಿಸಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ. ಯಾವುದೇ ವಿನಾಶಕಾರಿ ವಸ್ತು ಇಲ್ಲವೇ ಸ್ಪೋಟಕವಸ್ತು ಒಯ್ಯತಕ್ಕುದ್ದಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕಲ್ಲು ಅಥವಾ ಎಸೆಯುವ ವಸ್ತುಗಳ ಅಥವಾ ವಸ್ತುಗಳನ್ನು ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು, ತಯಾರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು, ಬಂದೂಕುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಮತ್ತು ಅಂತಹ ವ್ಯಕ್ತಿಯ ಬಳಿಯಲ್ಲಿರುವ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಣುಕು ಶವಗಳ ಪ್ರದರ್ಶನ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿಷೇಧಿಸಲಾಗಿದೆ. ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದಾತ್ಮಕವಾಗಿ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡುಗುವುದನ್ನು ನಿಷೇಧಿಸಲಾಗಿದೆ. ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಮತಗಟ್ಟೆಯ ಒಳಗಡೆ ಮೊಬೈಲ್ ಪೋನ್, ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಗಳ ಸುತ್ತ 200 ಮೀ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.