Views: 0
ಬಳ್ಳಾರಿ, ಮೇ 31:
ತಂಬಾಕು ಸೇವನೆ ಜೀವನಕ್ಕೆ ಮಾರಕವಾಗಿದ್ದು, ತಂಬಾಕು ತ್ಯಜಿಸಿ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಗುಲಾಬಿ ಆಂದೋಲನ ಅಂಗವಾಗಿ ಶುಕ್ರವಾರದಂದು ನಗರದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಏರ್ಪಡಿಸಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ರಾಷ್ಟ್ರ ಕಟ್ಟುವಲ್ಲಿ ಯುವ ಪೀಳಿಗೆಯ ಪಾತ್ರ ಬಹಳ ಮುಖ್ಯವಾಗಿದ್ದು, ಯುವಕರು ತಂಬಾಕು ಪದಾರ್ಥಗಳಿಗೆ ಬಲಿಯಾಗದೇ, ಅವುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ತಂಬಾಕು ಸೇವನೆಯಿಂದಾಗಿ ಭಾರತಲ್ಲಿ ಪ್ರತಿ 7 ನಿಮಿಷಕ್ಕೊಮ್ಮೆ 2500 ಮಂದಿ ಸಾವನ್ನಪ್ಪಿದರೆ, ವಿಶ್ವದಲ್ಲಿ ಪ್ರತಿ 6 ಸೆಕೆಂಡ್ಗೆ ಒಬ್ಬರು ತಂಬಾಕು ಸೇವನೆಯಿಂದ ಮಾರಕ ಖಾಯಿಲೆಗೆ ತುತ್ತಾಗಿ ಅಸುನೀಗುತ್ತಿದ್ದಾರೆ ಎಂದು ವಿಷಾದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಕ್ಷಯರೋಗ, ಸ್ಟ್ರೋಕ್ಸ್ನಂತಹ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಸಂಭವವಿದ್ದು, 15-25 ವರ್ಷದ ವಯೋಮಾನದವರು ತಂಬಾಕು ವಸ್ತುಗಳಿಂದ ದೂರವಿರಬೇಕು ಎಂದರು.
ಧೂಮಪಾನ ಮಾಡುವವರಿಗಿಂತ ಹೆಚ್ಚಾಗಿ ಅಸುಪಾಸು ಇರುವವರು ಹೊಗೆ ಸೇವನೆಯಿಂದಲೇ ಅತ್ಯಂತ ಪರಿಣಾಮ ಬೀರುತ್ತದೆ. ಹಾಗಾಗಿ ಧೂಮಪಾನ ಸೇವನೆ ಮಾಡುವರು ಮನೆಯಲ್ಲಿ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ತಂಬಾಕು ದೇಹಕ್ಕೆ ಶತ್ರುವಾಗಿದ್ದು, ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಯುವಕರು ಕ್ಷಣಿಕ ಸಂತೃಪ್ತಿಗಾಗಿ ತಮ್ಮ ಅತ್ಯಮೂಲ್ಯ ಜೀವನದ ಮೇಲೆ ಅಡ್ಡ ಪರಿಣಾಮ ಬೀಳದಂತೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ತಂಬಾಕು ವ್ಯಸನದಿಂದ ಪ್ರತಿಯೊಬ್ಬರೂ ದೂರ ಉಳಿಯಬೇಕು. ಮಕ್ಕಳು, ಯುವಕರು ತಂಬಾಕು ವ್ಯಸನಗಳಿಗೆ ಒಳಗಾಗಬಾರದು. ಅತಿಹೆಚ್ಚಾಗಿ ಇಂದಿನ ಯುವಪೀಳಿಗೆಯು ಧೂಮಪಾನಕ್ಕೆ ತುತ್ತಾಗುತ್ತಿದ್ದು, ಧೂಮಪಾನದಿಂದ ಉಂಟಾಗಬಹುದಾದ ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 20 ರಲ್ಲಿ ರೋಗಿಗಳಿಗೆ ಶ್ವಾಸಕೋಶ ಪರೀಕ್ಷೆ ಕೈಗೊಳ್ಳಲಾಗುತ್ತದೆ ಮತ್ತು ತಂಬಾಕು ತ್ಯಜಿಸುವ ಕುರಿತು ಆಪ್ತ ಸಮಾಲೋಚನೆ ನಡೆಸಲಾಗುತ್ತದೆ. ದುಶ್ಚಟಗಳಿಗೆ ಒಳಗಾದವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜಾಥಾ ಮಾರ್ಗ ಮಧ್ಯದಲ್ಲಿ ಗುಲಾಬಿ ಆಂದೋಲನ ಅಂಗವಾಗಿ ಸಾರ್ವಜನಿಕರಿಗೆ ಗುಲಾಬಿ ಹೂ ವಿತರಿಸಲಾಯಿತು ಮತ್ತು ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಡಿಎಲ್ಒ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ವಿ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.