“ವ್ಯಸನ ಮುಕ್ತಕ್ಕಾಗಿ ದೇಶಾದ್ಯಂತ ಜೋಳಿಗೆ ಕಾರ್ಯಕ್ರಮ ಮಾಡಿದ ಡಾ. ಮಹಾಂತ ಶಿವಯೋಗಿ ಅಜ್ಜನವರು”
ಸಮಾಜದಲ್ಲಿ ಯಾವೊಬ್ಬ ವ್ಯಕ್ತಿಯೂ ವ್ಯಸನಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಪ್ರತಿಯೊಬ್ಬರು ಉತ್ತಮ ಆರೋಗ್ಯ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕೆನ್ನುವ ಆರೋಗ್ಯಕರ ಸಮಾಜದ ಪರಿಕಲ್ಪನೆ ಇಟ್ಟುಕೊಂಡು ವ್ಯಸನ ಮುಕ್ತ ಸಮಾಜಕ್ಕಾಗಿ ‘ದೇಶಾದ್ಯಂತ ಜೋಳಿಗೆ ಕಾರ್ಯಕ್ರಮ’ ಮೂಲಕ ಸಂಚರಿಸಿ, ವ್ಯಸನ ಹಾಗೂ ದುಷ್ಚಟಗಳ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ಮನ ಪರಿವರ್ತಿಸಿದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 01 ಆಗಸ್ಟ್ 1930 ರಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು. ತಮ್ಮ 10 ನೇ ವಯಸ್ಸಿನಲ್ಲೇ ಸನ್ಯಾಸಿ ಜೀವನವನ್ನು ಸ್ವೀಕರಿಸಿ, ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮಿಜಿಗಳಾದರು.
ಇವರು ಕಾಶಿಯಲ್ಲಿ ಸಂಸ್ಕೃತ, ಹಿಂದಿ ಯೋಗ, ಶಾಸ್ತ್ರೀಯ ಸಂಗೀತ, ಆಧ್ಯಾತ್ಮಿಕ ಪ್ರವಚನ ಹೀಗೆ ನಾನಾ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದಿದ್ದರು.
*ವ್ಯಸನ ಮುಕ್ತ ಸಮಾಜಕ್ಕೆ ಶ್ರೀಗಳ ಕೊಡುಗೆ:* 1970 ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19 ನೇ ಪೀಠಾಧಿಕಾರಿಗಳಾದ ಡಾ. ಮಹಾಂತ ಶಿವಯೋಗಿ ಅಜ್ಜನವರು. ಬಳಿಕ ಉತ್ತರ ಕರ್ನಾಟಕದಿಂದ ‘ವ್ಯಸನ ಮುಕ್ತ’ಕ್ಕಾಗಿ ದೃಢ ಸಂಕಲ್ಪ ತೊಟ್ಟು,1975 ಕ್ಕೆ ಆರಂಭಿಸಿದ ‘ಮಹಾಂತ ಜೋಳಿಗೆ ಕಾರ್ಯಕ್ರಮ’ದಡಿ ದೇಶಾದ್ಯಂತ ಅಷ್ಟೇ ಅಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ಸಂಚರಿಸಿದ ಶ್ರೀಗಳು 42 ವರ್ಷಗಳ ಕಾಲ ಮಾದಕ ಸೇವನೆ ಹಾಗೂ ದುಷ್ಚಟಗಳಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ, ತಮ್ಮ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.
*ಬಹು ಸಮಾಜಮುಖಿ ಕೊಡುಗೆಯ ಜೋಳಿಗೆ ಹರಿಕಾರ:* ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಜಮೀನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ಅನುಕೂಲ ನೀಡಿದರು. ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾದಾಗ ನಾನಾ ಗ್ರಾಮಗಳಲ್ಲಿ ಗಂಜಿ ಕೇಂದ್ರ ತೆರೆಯುವ ಜತೆಗೆ ಹಲವಾರು ಬಹು ಸಮಾಜಮುಖಿ ಕಾರ್ಯಗಳನ್ನು ಮಾಡಿದರು.
*ಮಹಾಂತ ಜೋಳಿಗೆ ಕಾರ್ಯಕ್ರಮಕ್ಕೆ ಕಾರಣ:* ವಿಪರೀತ ಮದ್ಯಪಾನ ಸೇವನೆಯಿಂದ ಯುವಕನೊಬ್ಬ ಸಾವನ್ನಪ್ಪಿದ ಸುದ್ದಿ ತಿಳಿದು ಕುಟುಂಬಕ್ಕೆ ಸಾಂತ್ವಾನ ಹೇಳಲು ಅವನ ಕೇರಿಗೆ ತೆರಳಿದ್ದ ಶ್ರೀಗಳು. ಅಲ್ಲಿ ಮೃತ ಯುವಕನ ಧರ್ಮಪತ್ನಿ ಹಾಗೂ ಮಕ್ಕಳು ಉಪವಾಸದಿಂದ ಕಣ್ಣಿರು ಹಾಕುತ್ತಿರುವುದು ಕಂಡರು. ಇದೇ ರೀತಿ ಸಾವಿರಾರು ಕುಟುಂಬಗಳಲ್ಲಿ ಗಂಡಂದಿರು ಮದ್ಯಪಾನ ಸೇವನೆ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಸಾವಿಗಿಡಾಗುತ್ತಿದ್ದಾರೆ. ಇದರಿಂದ ಹೆಂಡತಿ, ಮಕ್ಕಳು ಸೇರಿ ಕುಟುಂಬಸ್ಥರು ಬೀದಿ ಪಾಲಾಗುತ್ತಿದ್ದಾರೆ. ಇಂತಹ ದುಷ್ಚಟಗಳಿಗೆ ಜೀವನ ಹಾಳಾಗಿಸಿಕೊಳ್ಳುತ್ತಿರುವದನ್ನು ನಿರ್ಮೂಲನೆ ಮಾಡಲು ‘ಮಹಾಂತ ಜೋಳಿಗೆ’ ಆರಂಭಿಸಿದರು.
ಮಹಾಂತ ಸ್ವಾಮಿಜಿಯವರು ಕೆಂಪು ಬಟ್ಟೆಯ ಜೋಳಿಗೆ ಹಿಡಿದುಕೊಂಡು ಕುಡಿತ ಚಟದಿಂದ ಸಾವಿಗಿಡಾದ ಯುವಕನ ಕೇರಿಯ ಗುಡಿಸಲು ಮನೆಗಳಿಗೆ ತೆರಳಿ, ಜನರು ಮದ್ಯಪಾನ, ತಂಬಾಕು, ಗುಟ್ಕಾ ಸೇರಿದಂತೆ ದುಷ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಲು ಭಿಕ್ಷೆ ರೂಪದಲ್ಲಿ ಬೇಡಿದರು.
ಹೀಗೆ ವ್ಯಸನ ಮಕ್ತ ಸಮಾಜದ ಪರಿಕಲ್ಪನೆಯೊಂದಿಗೆ ಜನರಲ್ಲಿ ವ್ಯಸನದಿಂದ ಸಂಭವಿಸುವ ಕ್ಯಾನ್ಸರ್ ನಂತಹ ಆರೋಗ್ಯ ಹಾನಿ ಕುರಿತು ಮನಸ್ಸಿಗೆ ಮುಟ್ಟುವಂತೆ ತಿಳುವಳಿಕೆಯ ಮಾತನ್ನು ಹೇಳಿದರು. ಜತೆಗೆ ವೈದ್ಯರು, ಸಾಹಿತಿಗಳು, ಕವಿಗಳು, ಧರ್ಮಗಳು ಹೀಗೆ ಪ್ರಖ್ಯಾತ ಮನಪರಿವರ್ತಿಸುವ ಜಾಗೃತಿ ಕಾರ್ಯಕ್ರಮ ಮುಂದುವರೆಸಿದರು.
*ಶ್ರೀಗಳಿಗೆ ಸಂದ ಗೌರವ ಹಾಗೂ ಪ್ರಶಸ್ತಿಗಳು:* 1967 ರಲ್ಲಿ ಹಾವೇರಿಯ ಹುಕ್ಕೇರಿ ಮಠದಿಂದ ‘ಅಭಿನವ ಚನ್ನಬಸವಣ್ಣ’, 1968 ರಲ್ಲಿ ದಾವಣಗೆರೆಯ ಗಾನಯೋಗಿ ಪುಟ್ಟರಾಜ ಗವಾಯಿಗಳ ಪುರಾಣ ಸಮಿತಿಯಿಂದ ‘ಕಾಯಕನಿಷ್ಠ ಶಿವಯೋಗಿ’, 1969 ರಲ್ಲಿ ಬಾಗಲಕೋಟೆಯ ನಾಗರಿಕರಿಂದ ‘ಪ್ರವಚನ ಪ್ರವೀಣ’, 1990 ರಲ್ಲಿ ಚಿತ್ತರಗಿ-ಇಳಕಲ್ಲ ಸದ್ಭಕ್ತರಿಂದ ‘ಶಿವಾನುಭವ ಚರವರ್ಯ’, 1971ರಲ್ಲಿ ರಾವೂರ(ಚಿತ್ತಾಪುರ) ಭಕ್ತರಿಂದ ‘ವೀರಶೈವ ತತ್ವವೆತ್ತ ಸಮಾಜ ಸಂಘಟಕ ಪ್ರಶಸ್ತಿ’ಗಳು ಸಂದಿವೆ.
ಅಲ್ಲದೆ, 1976 ರಲ್ಲಿ ಚಿತ್ತರಗಿ ಪೀಠದ ಭಕ್ತರಿಂದ ‘ಮಹಾಂತ ಜೋಳಿಗೆಯ ಶಿವಶಿಲ್ಪಿ’, 1981 ರಲ್ಲಿ ಧಾರವಾಡದ ಶ್ರೀ ಮುರುಘಾಮಠದಿಂದ ‘ಲಿಂಗವಂತ ಧರ್ಮ ಪ್ರಚಾರ ಧುರೀಣ’, 1992 ರಲ್ಲಿ ಅಥಣಿ ತಾಲೂಕು ಯೂಥ್ ಫೆಡರೇಶನ್‌ದಿಂದ ‘ಅರಿವಿನ ಮೂರ್ತಿ ಹಾಗೂ ಸವದಿ ಭಕ್ತರಿಂದ ಸವದಿಯ ಸಿರಿ’, 1995 ರಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠದಿಂದ ‘ಕಾಯಕಯೋಗಿ’, 1998 ರಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದಿಂದ ‘ದಲಿತೋದ್ಧಾರ ಮಹಾಂತ’, 2001ರಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠದಿಂದ ‘ಸಮಾಜ ಸುಧಾರಕ’, 2002 ರಲ್ಲಿ ಅಥಣಿಯ ವಿಮೋಚನಾ ಸಂಸ್ಥೆಯಿಂದ ‘ಹೇ ಅಮೃತ ನಿಧಿ’, 2003 ರಲ್ಲಿ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯಿಂದ ‘ಸ್ಪಂದನ ಪ್ರಶಸ್ತಿ’, 2006 ರಲ್ಲಿ ಗದಗ-ಬೆಟಗೇರಿಯ ಅಂಬಿಗೇರ ಪ್ರತಿಷ್ಠಾನದಿಂದ ‘ಗಣಾಚಾರ ಪ್ರಶಸ್ತಿ’, ಅಥಣಿಯ ಕನಕದಾಸ ಸಾಹಿತ್ಯ-ಸಂಸ್ಕೃತಿ ವೇದಿಕೆಯಿಂದ ‘ಕನಕಶ್ರೀ ಪ್ರಶಸ್ತಿ’, 2007 ರಲ್ಲಿ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ‘ನಾಡಿನ ಪುಣ್ಯದ ಶಿವಯೋಗಿ ಪ್ರಶಸ್ತಿ’, 2018 ರಲ್ಲಿ ಟಿವಿ9 ವಾಹಿನಿಯಿಂದ ‘ಯೋಗರತ್ನ ಪ್ರಶಸ್ತಿ’ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಮಠಮಾನ್ಯಗಳಿಂದ ಹಲವಾರು ಪ್ರಶಸ್ತಿಗಳಿಗೆ ಮಹಾಂತ ಶ್ರೀಗಳು ಭಾಜರಾಗಿದ್ದರು.
ವ್ಯಸನ ಮಕ್ತ ವ್ಯಕ್ತಿ, ಗ್ರಾಮ ಸೇರಿದಂತೆ ಇಡೀ ಮಾನವ ಸಮಾಜವೇ ದುಷ್ಚಟಗಳಿಂದ ಮುಕ್ತರಾಗಬೇಕು. ಎಲ್ಲ ಜನರು ಉತ್ತಮ ಆರೋಗ್ಯ ಪಡೆಯಬೇಕು ಎನ್ನುವ ಬಹು ಸಮಾಜಮುಖಿ ಉದ್ದೇಶದಿಂದ ಶ್ರಮಿಸಿದ ಡಾ. ಮಹಾಂತ ಶಿವಯೋಗಿ ಅಜ್ಜನವರು. 2018 ರಲ್ಲಿ ಶ್ರೀಗಳು ಅಪಾರ ಸಂಖ್ಯೆಯ ಭಕ್ತಗಣವನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿ ಶಿವೈಕ್ಯರಾದರು.
ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ದೇಶ-ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಜನಜಾಗೃತಿ ಮೂಡಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ವರ್ಷವೂ ಶ್ರೀಗಳ ಜನ್ಮದಿನವಾದ ‘ಆಗಸ್ಟ್ 01 ಅನ್ನು ವ್ಯಸನ ಮುಕ್ತ ದಿನಾಚರಣೆ’ಯನ್ನಾಗಿ ರಾಜ್ಯಾದ್ಯಂತ ಆಚರಿಸುವ ಮೂಲಕ ಶ್ರೀಗಳ ಸಮಾಜ ಸೇವೆ ಸ್ಮರಿಸಿಕೊಳ್ಳುತ್ತಾ, ಸಮಾಜದ ಯುವ ಜನತೆ ಮಾದಕ ವಸ್ತುಗಳ ಸೇವನೆ ಹಾಗೂ ದುಷ್ಚಟಗಳಿಗೆ ಅಂಟಿಕೊಳ್ಳದೇ ದೂರವಿದ್ದು, ಸಾರ್ವಜನಿಕರು ಆರೋಗ್ಯಯುತ ಬದುಕು ಕಟ್ಟಿಕೊಳ್ಳುವಂತೆ ಜಾಗೃತಿಯ ಸಂದೇಶ ಸಾರುತ್ತಿದೆ.
*ಲೇಖನ:- ರೇವಣಸಿದ್ದ ಬಗಲಿ*
(ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.)