ಬೆಂ. ಗ್ರಾ. ಡಿಸೆಂಬರ್ 04,
ಜಿಲ್ಲೆಯಾದ್ಯಂತ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳ ಪಟ್ಟಿ ಸಿದ್ಧ ಪಡಿಸಲಾಗದ್ದು ಹಂತ ಹಂತವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 533.38 ಎಕರೆ ಆಶ್ರಯ ಯೋಜನೆಯಡಿ ಜಮೀನು ಗುರ್ತಿಸಲಾಗಿದ್ದು 480 ಎಕರೆ ನಿವೇಶನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ನಿಗಮದಿಂದ 64.18 ಎಕರೆಯಲ್ಲಿ 1694 ನಿವೇಶನಗಳ ಅಭಿವೃದ್ಧಿಗೆ ಆನುದಾನ ಬಿಡುಗಡೆ ಆಗಿದ್ದು 292 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿ ಆನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.
ಜೆ.ಜೆ.ಎಂ.ಯೋಜನೆಯಡಿ ಮನೆ ಮನೆಗೂ ನಳ ಸಂಪರ್ಕ ಕಲ್ಪಿಸಲು ರಸ್ತೆ ಅಗೆದಿದ್ದು ಮುಚ್ಚದೇ ಹಾಗೆ ಬಿಟ್ಟಿರುವುದು, ನೀರು ಸರಬರಾಜು ಪೈಪ್ ಗಳ ಗುಣಮಟ್ಟ ಕಳಪೆ ಆಗಿದೆ ಎಂಬ ದೂರಿನ ಅನ್ವಯ, ಯಾವ ಯಾವ ಹಳ್ಳಿಗಳಲ್ಲಿ ಈ ರೀತಿಯ ಅವ್ಯವಸ್ಥೆ ಆಗಿದೆ ಎಂಬುದರ ಮಾಹಿತಿ ಪಡೆದೆ ಖದ್ದಾಗಿ ಅಧಿಕಾರಿಗಳು ಸ್ಥಳ ಪರಶೀಲನೆ ನಡೆಸಿ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ರಾಜ್ಯಾದ್ಯಂತ ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆ.ಪಿ.ಎಸ್ ಶಾಲೆಗಳಿಗೆ ಅವಶ್ಯವಿರುವ ಸೌಕರ್ಯಗಳ ಬಗ್ಗೆ ತಾಲ್ಲೂಕು ಬಿ.ಇ.ಒ ಗಳು ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಯೋಜನೆ ಸಿದ್ಧಪಡಿಸಿ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಎಲ್ಲ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಸಿಗುವಂತೆ ಮಾಡಬೇಕು. ಸಿ.ಆರ್.ಪಿ./ ಬಿ.ಆರ್.ಪಿ. ಗಳು ಶಾಲೆಗಳಿಗೆ ಹೆಚ್ಚಿನ ಭೇಟಿ ನೀಡಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.
*ನೆಲಮಂಗಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ನೆಲಮಂಗಲ ಶಾಸಕರ ಒತ್ತಾಯ*
ನೆಲಮಂಗಲ ವ್ಯಾಪ್ತಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಲಿದ್ದು ನೆಲಮಂಗಲ ತುಮಕೂರು ಹೈವೇ ಯಲ್ಲಿ ಪ್ರತಿ ದಿನ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಕೆಳ ಸೇತುವೆ(ಅಂಡರ್ ಪಾಸ್) ಇಲ್ಲದಿರುವುದು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಸದ ಸಮಸ್ಯೆ ಕೂಡ ಹೆಚ್ಚಾಗಿದ್ದು ಕಸ ತೆರವುಗೊಳಿಸಬೇಕು. ಅಪಘಾತಗಳನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಿಸುವಂತೆ ಶಾಸಕರು ಸಚಿವರಲ್ಲಿ ಮನವಿ ಮಾಡಿದರು. ಸಚಿವರು ಮನವಿಗೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಯಲಹಂಕ ಹಾಗೂ ಗೌರಿಬಿದನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯೂ ದೊಡ್ಡಬಳ್ಳಾಪುರದಲ್ಲಿ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಆದರೆ ಈ ರಸ್ತೆ ಅವೈಜ್ಞಾನಿಕವಾಗಿ ಕೂಡಿದ್ದು, ಈಗಾಗಲೇ ಈ ರಸ್ತೆಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದರು ಯಾವುದೇ ಕ್ರಮವಹಿಸಿಲ್ಲ. ರಸ್ತೆಯಲ್ಲಿ ಟೋಲ್ ವಸೂಲಿ ಆರಂಭವಾಗಿ ಅನೇಕ ವರ್ಷಗಳೇ ಕಳೆದರೂ ಭೂಸ್ವಾಧೀನ ಇನ್ನೂ ಬಾಕಿ ಉಳಿದಿದೆ. ಈ ರಸ್ತೆಯಲ್ಲಿ ಹಲವೆಡೆ ಬೀದಿ ದೀಪಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಸಾಕಷ್ಟು ಅಪಘಾತಗಳು ಕೂಡ ಈ ರಸ್ತೆಯಲ್ಲಿ ಸಂಭವಿಸುತ್ತಿದೆ.ಆದಷ್ಟು ಬೇಗ ಈ ರಸ್ತೆ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಮನವಿ ಮಾಡಿದರು.
ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ಜಿಲ್ಲೆಯ 18 ಕಿಮೀ ರಾಷ್ಟ್ರೀಯ ಹೆದ್ದಾರಿಯ ಲ್ಲಿ ಗಿಡ ನೆಡಲಾಗುವುದೆಂದರು ಹಾಗೂ ಬೆಸ್ಕಾಂ ನವರು ವಿದ್ಯುತ್ ಕಂಬಗಳನ್ನು ಅರಣ್ಯ ಪ್ರದೇಶದ ಅಂಚಿನಲ್ಲಿ ನೆಡುತ್ತಾರೆ ಮತ್ತೆ ಅವುಗಳನ್ನು ತೆರವುಗೊಳಿಸಲು ನಾವೇ ಹಣ ಕಟ್ಟಬೇಕೆಂದರು.
ಪಿ.ಎಂ. ಪೋಷಣ್ ಯೋಜನೆಯಡಿ ಮಕ್ಕಳಿಗೆ 6 ದಿನ ಮೊಟ್ಟೆ ನೀಡಲಾಗುತಿದ್ದು, ಶೇ,81 ರಷ್ಟು ಮಕ್ಕಳಿಗೆ ಮೊಟ್ಟೆ, 21 ಶೇ ಮಕ್ಕಳಿಗೆ ಚಿಕ್ಕಿ ಬಾಳೆಹಣ್ಣು ವಿತರಿಸಲಾಗುತ್ತಿದೆ ಎಂದರು.
ನೆಲಮಂಗಲ ಶಾಸಕರು ನಾನು ಚಿಕ್ಕಿ ತಿಂದಿದ್ದೇನೆ ಮರಳಿನಂತಹ ಕಲ್ಲುಗಳಿರುತ್ತವೆ ಎಂದಾಗ ಅಧಿಕಾರಿ ಪ್ರತಿಕ್ರಿಯಿಸಿ ಒಮ್ಮೊಮ್ಮೆ ಬೆಲ್ಲದಲ್ಲಿ ಕಲ್ಲುಗಳಿದ್ದಾಗ ಹಾಗೆ ಆಗಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ರವಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿಸಿ ಜಾಫರ್, ಜಿಲ್ಲಾಧಿಕಾರಿ ಡಾ. ಶಿವಶಂಕರ್ ಎನ್ , ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಡಿಎಫ್ಒ ಸರೀನಾ , ಎಎಸ್ಪಿ ನಾಗರಾಜು, ಡಿವೈಎಸ್ಪಿ ರವಿ, ಎಸಿ ದುರ್ಗಾಶ್ರಿ , ಜಿಪಂ ಉಪ ಕಾರ್ಯದರ್ಶಿ ಟಿ.ಕೆ ರಮೇಶ್ ಸೇರಿದಂತೆ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.