ಜಲಜೀವನ್ ಮಿಷನ್ ಯೋಜನೆಯಡಿ 8 ಕಾಮಗಾರಿಗಳಿಗೆ ಪೈಪ್‍ಲೈನ್, ನಲ್ಲಿ ಅಳವಡಿಕೆ ಕಾಮಗಾರಿಗಳಿಗೆ ಸಮಿತಿ ಅನುಮೋದನೆ; ಸುರೇಶ್ ಬಿ.ಇಟ್ನಾಳ್
ದಾವಣಗೆರೆ .ಜೂ.14;
ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಜವಾಬ್ದಾರಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಕಿರಿಯ ಇಂಜಿನಿಯರ್‍ಗಳ ಜವಾಬ್ದಾರಿಯಾಗಿದ್ದು ಕಲುಷಿತ ನೀರು ಪೂರೈಕೆಯಾದಲ್ಲಿ ಇವರನ್ನೆ ಒಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 4 ನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು ಮನೆ ಮನೆಗೂ ನಲ್ಲಿಯನ್ನು ಅಳವಡಿಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಪೈಪ್ ಅಳವಡಿಸಲಾಗಿದ್ದು ಮನೆ ಮನೆಗೆ ನಲ್ಲಿ ಸಂಪರ್ಕಕ್ಕೆ ಸಿವಿಪಿವಿಸಿ ಪೈಪ್ ಅಳವಡಿಕೆಗೆ ಸಿಸಿ ರಸ್ತೆ ಕಟ್ಟಿಂಗ್ ಮಾಡಲು ಮತ್ತು ಕೊಳವೆಬಾವಿಯಿಂದ ನೀರಿನ ಪೈಪ್‍ಲೈನ್ ಅಳವಡಿಕೆ ಮಾಡಲು 8 ಕಾಮಗಾರಿಗಳಿಗೆ ಸಮಿತಿಯು ಅನುಮೋದನೆ ನೀಡಿದೆ ಎಂದರು.
ಸಮಿತಿಯ ಮುಂದೆ 13 ಗ್ರಾಮಗಳಲ್ಲಿ ಸಿಸಿ ರಸ್ತೆ ಕಟಿಂಗ್ ಮಾಡಿ ನಲ್ಲಿ ಅಳವಡಿಕೆ, ಪೈಪ್‍ಲೈನ್ ಅಳವಡಿಕೆ, ಓವರ್‍ಹೆಡ್ ಟ್ಯಾಂಕ್‍ಗಳ ದುರಸ್ಥಿ ಕಾಮಗಾರಿಗೆ ಅನುಮೋದನೆ ನೀಡಲು ಪರಿಶೀಲಿಸಲಾಯಿತು. ಕೆಲವು ಕಾಮಗಾರಿಗಳು ಯೋಜಿತ ಕಾಮಗಾರಿಗಿಂತ ಅಂದಾಜು ಮೊತ್ತ ಹೆಚ್ಚಿದ್ದು ಸ್ಥಳ ಮಹಜರು ಮಾಡಿದ ನಂತರ ಅನುಮೋದನೆ ನೀಡಲು ಸಮಿತಿ ತೀರ್ಮಾನಿಸಿತು.
ಅನುಮೋದಿತ ಕಾಮಗಾರಿಗಳಲ್ಲಿ ನಲ್ಲಿ ಅಳವಡಿಕೆ, ವಿತರಣಾ ಪೈಪ್, ಟ್ಯಾಂಕ್ ರಿಪೇರಿ ಕೈಗೊಳ್ಳಲಾಗುತ್ತದೆ. ಅನುಮೋದನೆ ನೀಡಿದ ಗ್ರಾಮಗಳ ವಿವರ; ಹೆಬ್ಬಾಳ, ಕಾಟೀಹಳ್ಳಿ, ನೀರ್ಥಡಿ ದ್ಯಾಮೇನಹಳ್ಳಿ, ಶ್ರೀರಾಮನಗರ ಆಲೂರಟ್ಟಿ, ಸಿದ್ದನೂರು, ಕೆರೆಯಾಗಲಹಳ್ಳಿ, ಅವರಗೊಳ್ಳ ಈ ಗ್ರಾಮಗಳ ಕಾಮಗಾರಿಗೆ ಅನುಮೋದನೆ ನೀಡಿ ಬೇತೂರು, ಗುಮ್ಮನೂರು ಕದರಪ್ಪನಹಟ್ಟಿ, ಗೊಲ್ಲರಹಳ್ಳಿ, ಹೊನ್ನೂರು, ಕಕ್ಕರಗೊಳ್ಳ ಆಂಜಿನೇಯ ಬಡಾವಣೆ ಇಲ್ಲಿನ ಕಾಮಗಾರಿಗೆ ಸ್ಥಳ ಪರಿಶೀಲನೆ ಮಾಡಿ ಅನುಮೋದನೆ ನೀಡಲು ತೀರ್ಮಾನಿಸಲಾಯಿತು.
ಕುಡಿಯುವ ನೀರಿನ ಪರೀಕ್ಷೆ ಆಂದೋಲನಕ್ಕೆ ಸೂಚನೆ; ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಪೂರೈಕೆ ಮಾಡುವ ಕುಡಿಯುವ ನೀರನ್ನು ಎಲ್ಲಾ ಹಂತದಲ್ಲಿ ಪರೀಕ್ಷೆಯನ್ನು ಕೈಗೊಳ್ಳಬೇಕಾಗಿದೆ. ಇದೊಂದು ಆಂದೋಲನದ ರೀತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮಾಡಬೇಕಾಗಿದೆ. ಕುಡಿಯುವ ನೀರಿನ ಪರೀಕ್ಷೆಗಾಗಿ ದಾವಣಗೆರೆ ಮತ್ತು ಚನ್ನಗಿರಿಯಲ್ಲಿ ಪ್ರಯೋಗಾಲಯಗಳಿವೆ. ಇಲ್ಲಿಗೆ ನೀರಿನ ಮಾದರಿಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಬೇಕು. ನೀರಿನ ಮೂಲ, ಪೈಪ್‍ಲೈನ್, ಟ್ಯಾಂಕ್‍ಗಳಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದರು.
ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಮುಂದಿನ ದಿನಗಳಲ್ಲಿ ಸತತವಾಗಿ ಒಂದು ವಾರಗಳ ಕಾಲ ಸಮಗ್ರವಾಗಿ ಪರಿಶೀಲನೆ ಮಾಡಿ ಪರೀಕ್ಷೆಗೆ ಒಳಪಡಿಸುವುದು, ಟ್ಯಾಂಕ್ ಸ್ವಚ್ಚ ಮಾಡಿ ಕ್ಲೋರಿನೇಷನ್ ಮಾಡಲು ಸೂಚನೆ ನೀಡಿ ಕಲುಷಿತ ನೀರು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಲುಷಿತ ಕುಡಿಯುವ ನೀರಿನ ಪ್ರಕರಣಗಳು ಕಂಡು ಬಂದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಕಿರಿಯ ಇಂಜಿನಿಯರ್‍ನ್ನು ಒಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ಜಾಗೃತಿ ಮೂಡಿಸಿ; ಗ್ರಾಮಾಂತರ ಪ್ರದೇಶದಲ್ಲಿ ವಾಹನಗಳ ಮೂಲಕ ಶುದ್ದ ಕುಡಿಯುವ ನೀರಿನ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕರಪತ್ರ, ಜಿಂಗಲ್ಸ್‍ಗಳನ್ನು ಬಳಕೆ ಮಾಡಲು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಹಿರಿಯ ಭೂ ವಿಜ್ಞಾನಿ ಬಸವರಾಜು, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಹಾಗೂ ಕಾರ್ಯಪಾಲಕ ಇಂಜಿನಿಯರ್ ಸೋಮ್ಲನಾಯ್ಕ್ ಉಪಸ್ಥಿತರಿದ್ದರು.