ಬೆಂಗಳೂರು, ಜುಲೈ 22
ಶೃಂಗೇರಿಯು ಒಂದು ಪವಿತ್ರ ಯಾತ್ರಾ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಪಟ್ಟಣಕ್ಕೆ ಆಗಮಿಸುವವರ ಸಂಖ್ಯೆಯು ಪ್ರತಿದಿನ ಹೆಚ್ಚುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯವು ಸಂಗ್ರಹಣೆಯಾಗುತ್ತಿದ್ದು, ಈ ಕಸವನ್ನು ವಿಲೇವಾರಿ ಮಾಡಲು ಅಸಾಧ್ಯವಾಗಿರುತ್ತದೆ.
ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ 15 ಜನ ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ ಕೇವಲ 2 ಜನ ಖಾಯಂ ಪೌರ ಕಾರ್ಮಿಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ನೇರ ಪಾವತಿಯಡಿ 09 ಜನ, ಹೊರಗುತ್ತಿಗೆಯಲ್ಲಿ 02 ಹಾಗೂ ದಿನಗೂಲಿಯಲ್ಲಿ 01 ಪೌರಕಾರ್ಮಿಕರು ಸೇರಿ ಒಟ್ಟು 13 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಈ ಯಾತ್ರಾಸ್ಥಳದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಹೆಚ್ಚಿನ ತ್ಯಾಜ್ಯವಸ್ತುವನ್ನು ಈ 13 ಜನ ಪೌರಕಾರ್ಮಿಕರಿಂದ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗಿರುತ್ತದೆ.
ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಜನಸಂಖ್ಯೆಯ ಆಧಾರದಲ್ಲಿ ಪೌರಕಾರ್ಮಿಕರ ಸಂಖ್ಯೆಯನ್ನು ಪರಿಗಣಿಸಿಕೊಂಡು ಪಟ್ಟಣದ ಸ್ವಚ್ಛತಾ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆಂದು ತಿಳಿದುಬಂದಿದೆ. ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇದ್ದರೂ ಪಂಚಾಯ್ತಿಯ ಸರ್ಕಾರದ ಪೂರ್ವ ಮಂಜೂರಾತಿ ಪಡೆಯಬೇಕೆಂಬ ಷರತ್ತು ಇರುತ್ತದೆ. ಶೃಂಗೇರಿ ಪಟ್ಟಣ ಪಂಚಾಯ್ತಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ 20 ಪೌರಕಾರ್ಮಿಕರ ಹುದ್ದೆಗಳನ್ನು ಮಂಜೂರು ಮಾಡಲು ಹಾಗೂ ಕರ್ನಾಟಕದ ಪುರಸಭೆಗಳ (ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯ್ತಿಗಳ ನೇಮಕಾತಿ ವಿಶೇಷ) ನಿಯಮಗಳು 2022 ರಂತೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿ ಮುಕ್ತಾಯಗೊಂಡಿರುವುದರಿಂದ ಈ ಅವಧಿಯನ್ನು ವಿಸ್ತರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ಪೌರಕಾರ್ಮಿಕರು ತಮ್ಮ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಇತ್ತೀಚೆಗೆ ಮುಷ್ಕರ ನಡೆಸಿದ್ದು, ಡೆಂಗ್ಯು ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಆಶ್ವಾಸನೆಯಿಂದ ಮುಷ್ಕರವನ್ನು ಹಿಂಪಡೆದಿರುತ್ತಾರೆ.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಅವರು ಇತ್ತೀಚೆಗೆ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೌರಕಾರ್ಮಿಕರು ಈ ಎಲ್ಲಾ ಸಮಸ್ಯೆಗಳ ಬಗ್ಗೆ, ಮನವಿಯನ್ನು ಸಲ್ಲಿಸಿ. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷರು ಸರ್ಕಾರದ ಮಟ್ಟದಲ್ಲಿ ಸಚಿವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿರುತ್ತಾರೆ.
ಈ ಹಿನ್ನಲೆಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಹಾಗೂ ಹೆಚ್ಚುವರಿ ಹುದ್ದೆಯನ್ನು ಮಂಜೂರು ಮಾಡುವ ಬಗ್ಗೆ ಹಾಗೂ ಇತರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರು ಇಂದು ಪೌರಾಡಳಿತ ಸಚಿವರಾದ ರಹೀಂ ಖಾನ್‍ರವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು. ಸದರಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಕೂಡಲೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದೆಂದು ಆಶ್ವಾಸನೆ ನೀಡಿರುತ್ತಾರೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.