ಬಿಬಿಎಂಪಿ ಕಂದಾಯ ವಿಭಾಗಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಬುಧವಾರ ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಿ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಮನವಿಗಳನ್ನು ವಿಲೇವಾರಿ ಮಾಡಲು *ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್* ರವರು ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಮುಖ್ಯ ಆಯುಕ್ತರು ರವರ ನಿರ್ದೇಶನದಂತೆ ಕಂದಾಯ ವಿಭಾಗದ ಅಧಿಕಾರಿಗಳು ಅವರವರ ಕಛೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಕಡ್ಡಾಯವಾಗಿ ಹಾಜರಿದ್ದು, “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಬೇಕು. ಸದರಿ ಅಧಿಕಾರಿಗಳನ್ನು ಯಾವುದೇ ಭೌತಿಕ ಸಭೆಗೆ ಅಥವಾ ಸಾಮಾನ್ಯ ಸಭೆಗೆ, ವರ್ಚುಯಲ್ ಸಭೆಗೆ ಕರೆಯಬಾರದು.
ಸದರಿ ವೇಳೆಯಲ್ಲಿ ಕಛೇರಿ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಸಾರ್ವಜನಿಕರಿಂದ ಸ್ವೀಕರಿಸುವ ಎಲ್ಲಾ ಕುಂದು ಕೊರತೆಗಳನ್ನು ಮತ್ತು ಮನವಿಗಳನ್ನು “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಿ ಶೀಘ್ರವಾಗಿ ವಿಲೇವಾರಿ ಮಾಡುವುದು.
ಪಾಲಿಕೆಯ ಎಲ್ಲಾ ವಲಯ ಜಂಟಿ ಆಯುಕ್ತರುಗಳು, ವಲಯ ಉಪ ಆಯುಕ್ತರುಗಳು (ಕಂದಾಯ), ಕಂದಾಯ ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳು ಅವರವರ ಕಛೇರಿಯಲ್ಲಿ ಕ್ಯಾಂಪ್ ಮಾಡಿ, ಸಾರ್ವಜನಿಕರಿಗೆ ಲಭ್ಯವಿದ್ದು, “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಿ ಎಲ್ಲಾ ಸಾರ್ವಜನಿಕರ ಕುಂದು ಕೊರತೆಗಳನ್ನು ಮತ್ತು ಮನವಿಗಳನ್ನು ವಿಲೇವಾರಿ ಮಾಡುವುದು.
ಎಲ್ಲಾ ವಲಯ ಆಯುಕ್ತರುಗಳು ಮತ್ತು ವಲಯ ಜಂಟಿ ಆಯುಕ್ತರುಗಳು ಇದನ್ನು ಕಾರ್ಯಗತಗೊಳಿಸಲು ಸಂಪೂರ್ಣ ಜವಾಬ್ದಾರಿ ವಹಿಸುವುದು.
ಮುಂದುವರೆದು, ಪ್ರತಿ ಬುಧವಾರದ “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ಕಾರ್ಯಕ್ಷಮತೆಯ ಬಗ್ಗೆ ಪ್ರತಿ ಸೋಮವಾರ ಮುಖ್ಯ ಆಯುಕ್ತರುರವರ ಅಧ್ಯಕ್ಷತೆಯಲ್ಲಿ “ಸಕಾಲ ಮತ್ತು ಕುಂದುಕೊರತೆ” ಪರಿಶೀಲನಾ ಸಭೆಯನ್ನು ನಡೆಸಲಾಗುವುದು.