ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಸಿವಿಲ್ ಕಾಮಗಾರಿಗಳಿಂದಾಗಿ ಸೃಜನೆಯಾಗುವ ಕಟ್ಟಡ ಭಗ್ನಾವಶೇಷ(ಡೆಬ್ರಿಸ್)ಗಳ ನಿವಾರಣೆ ಮತ್ತು ನಿರ್ಮೂಲನೆಗಾಗಿ ತಗಲುವ ವೆಚ್ಚವನ್ನು ಆಯಾ ಕಾಮಗಾರಿಯ ಬಿಲ್ಲುಗಳಲ್ಲಿ ಕಡಿತಗೊಳಿಸುವ ಕುರಿತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಆದೇಶ ಹೊರಡಿಸಿರುತ್ತಾರೆ. ಅವುಗಳು ಈ ಕೆಳಕಂಡಂತಿವೆ.
1. ಪಾಲಿಕೆಯಿಂದ ಕೈಗೊಳ್ಳಲಾದ ಚಾಲನೆಯಲ್ಲಿರುವ ಕಾಮಗಾರಿಗಳಿಂದ ಆಗಾಗ್ಗೆ ಸೃಜನೆಗೊಳ್ಳುವ ಕಟ್ಟಡ ಭಗ್ನಾವಶೇಷಗಳನ್ನು ಆಯಾ ಗುತ್ತಿಗೆದಾರರಿಂದ ತೆರವುಗೊಳಿಸುವುದು ಮತ್ತು ಸಂಬಂಧಿಸಿದ ಅಧಿಕಾರಿಯು ನಿರಂತರ ಉಸ್ತುವಾರಿ ವಹಿಸುವುದು.
2. ಸದರಿ ಕಾಮಗಾರಿಗಳು ಮುಕ್ತಾಯಗೊಂಡ ನಂತರವು ಸಹ ಯಾವುದೇ ತೆರನಾದ ಕಟ್ಟಡ ಭಗ್ನಾವಶೇಷಗಳನ್ನು ಸೃಜಿಸದಂತೆ ಆಯಾ ಗುತ್ತಿಗೆದಾರರಿಗೆ ಸೂಚಿಸುವುದು.
3. ಒಂದು ವೇಳೆ, ಕಾಮಗಾರಿಗಳು ಮುಕ್ತಾಯಗೊಂಡ ನಂತರ ಕಟ್ಟಡ ಭಗ್ನಾವಶೇಷಗಳನ್ನು ಸೃಜಿಸಿ ತೆರವುಗೊಳಿಸದೇ ಇದ್ದ ಪಕ್ಷದಲ್ಲಿ, ಪಾಲಿಕೆಯಿಂದಲೇ ತೆರವುಗೊಳಿಸಲು ಕ್ರಮವಹಿಸಿ ಅಂತಿಮ ಬಿಲ್ಲುಗಳಲ್ಲಿ ಡೆಬ್ರಿಸ್ ತೆರವಿಗೆ ತಗುಲಿದ ವೆಚ್ಚಗಳ *1.5ಪಟ್ಟು(ಶೇ.150ರಷ್ಟು) ಕಟಾವಣೆಗೊಳಿಸುವುದು.*
ಈ ಮೇಲಿನ ಅಂಶಗಳನ್ನು ತಕ್ಷಣ ಜಾರಿಗೊಳಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಲಯಗಳ ವಲಯ ಆಯುಕ್ತರು/ಜಂಟಿ ಆಯುಕ್ತರು/ಮುಖ್ಯ ಅಭಿಯಂತರರು/ಕಾರ್ಯಪಾಲಕ ಅಭಿಯಂತರರು/ ಸಹಾಯಕ ಕಾರ್ಯಪಾಲಕ ಅಭಿಯಂತರರುರವರುಗಳಿಗೆ ಈ ಮೂಲಕ ಸೂಚಿಸುತ್ತಾ, ವಿಭಾಗೀಯ ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರುರವರನ್ನು ಅನುಷ್ಠಾನಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.