Views: 0
ಧಾರವಾಡ ಜೂನ್.03:
ನಾಳೆ ಜೂನ 4 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುವ ಧಾರವಾಡ-11 ಲೋಕಸಭಾ ಮತಕ್ಷೇತ್ರದ ಮತ ಎಣಿಕಾ ಕಾರ್ಯದ ಅಂತಿಮ ಸಿದ್ಧತೆಗಳನ್ನು ಇಂದು (ಜೂ.3) ಮಧ್ಯಾಹ್ನ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಕೃಷಿ ವಿಶ್ವವಿದ್ಯಾಲಯದ ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪ್ರತಿ ವಿಧಾನಸಭಾ ಮತಕ್ಷೇತ್ರವಾರು ಸ್ಥಾಪಿಸಿರುವ ಮತ ಎಣಿಕಾ ಕೊಠಡಿಗಳಿಗೆ ಭೇಟಿ ನೀಡಿ, ಮತ ಎಣಿಕಾ ಸಿಬ್ಬಂದಿ ಸ್ಥಳ, ಏಜಂಟರ ಸ್ಥಳ, ಸಹಾಯಕ ಚುನಾವಣಾಧಿಕಾರಿಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಸ್ಟ್ರಾಂಗ್ ರೂಮ್ ಭದ್ರತೆ ಪರಿಶೀಲಿಸಿದರು.
ನಂತರ ಅವರು ಮಾಧ್ಯಮಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಟಿವಿ ವ್ಯವಸ್ಥೆ, ವೈಪೈ ವ್ಯವಸ್ಥೆ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅಲ್ಲಿಂದ ಮಾಧ್ಯಮ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳ ಏಜಂಟರಿಗೆ ಮಾಡಿರುವ ಊಟ, ಉಪಹಾರದ ವ್ಯವಸ್ಥೆಯ ಸ್ಥಳ, ಪಾರ್ಕಿಂಗ್ ಸ್ಥಳ ಮತ್ತು ಸಂಚಾರ ಮಾರ್ಗಗಳಿಗೆ ಭೇಟಿ ನೀಡಿ, ವ್ಯವಸ್ಥಾಪಕರಿಗೆ,ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಮಾಧ್ಯಮ ಕೇಂದ್ರದ ನೊಡಲ್ ಅಧಿಕಾರಿ ಆಗಿರುವ ತಹಶೀಲ್ದಾರ ಡಾ.ಡಿ.ಎಚ್. ಹೂಗಾರ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.