ಕಿಟಕಿಯಿಂದಾಚೆ ಸುರಿವ
ಮಳೆಹನಿಗೆ ಮುಖವೊಡ್ಡಿದಾಗ
ಒಂದೊಂದು ಹನಿಯು ಹೇಳಿತು
ಇದೋ ಇವು ನಿನ್ನಿನಿಯನಾ
ಮುತ್ತಿನ ಸುರಿಮಳೆಯೆಂದು
ಉದುರಿದ ಹನಿಯ ತಟಪಟ ಸದ್ದು
ನಲ್ಲನಿಂಪಾದ ಮೆಲುದನಿಯೊಲು
ಸುಂಯ್ ಎಂದು ಬೀಸಿದ ತಂಗಾಳಿ
ತಂದ ಹಸಿಮಣ್ಣಿನ ಘಮಲು
ಜ್ಞಾಪಿಸಿತು ಪ್ರಿಯನ ಒದ್ದೆ ಕರಸ್ಪರ್ಶವ
ಗುಡುಗು ಕೋಲ್ಮಿಂಚು ತಂದಿತು
ಮಧುರ ಆಲಿಂಗನದ ಬಯಕೆಯ
ಮತ್ತೊಮ್ಮೆ ನೆನಪಿಸಿತು
ಪಡೆದ ಮೃದು ಚುಂಬನದ ಸವಿಯ
ಓ ವರುಣನೇ!! ಇನ್ನೂ ಸುರಿ ರಭಸದಿ
ರಮಣನೊಲವ ನೆನಪಲ್ಲಿ
ತೊಯ್ದ ರಾತ್ರಿಯ ಮಳೆಯಂತೆ
ಅಬ್ಬರಿಸಿ ಬಾ ಇಳೆಗೆ
ಎಂದೋ ಮೌನದಿ ಮುಸುಕು
ಹೊದ್ದಿದ್ದ ಕವಿಮನಕೀಗ
ಹುಚ್ಚೆದ್ದು ಕುಣಿಯುವ ತವಕ
ಗರಿಗೆದರಿದ ನವಿಲಿನೋಪಾದಿಯಲಿ
ಮರೆತಿದ್ದ ಎಲ್ಲ ಭಾವಗಳ ಹೆಕ್ಕಿ
ನವಿರಾಗಿ ನೆಂದ ಮುಸಲಧಾರೆಯಲಿ
(ರು. ಸು. ನಾ)
ರುಕ್ಮಿಣಿ ಎಸ್ ನಾಯರ್
ಬೆಂಗಳೂರು.