ಮಾತುಗಳನ್ನು ಆಡುವ ಮುನ್ನ…..

0
54
Oplus_131072
Share this Article
0
(0)
Views: 1

“ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು”

ನಿಜಕ್ಕೂ ಈ ಗಾದೆಯ ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ? ನಾವು ಆಡುವ ಮಾತುಗಳು ಎಷ್ಟು ಮಹತ್ವ ಪೂರ್ಣವಾಗಿರುತ್ತದೆ ಎಂದರೆ ಅದನ್ನು ಆಡಿದ ನಂತರದ ಪರಿಣಾಮದಿಂದ ಅದು ತಿಳಿಯುತ್ತದೆ. ಮಾತುಗಳು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬಿರುವುದು. ಒಳ್ಳೆಯ ಮಾತುಗಳು ಒಳ್ಳೆಯ ಪರಿಣಾಮವನ್ನು ಬೀರಿದರೆ ಕೆಟ್ಟವು ಆಘಾತಕಾರಿ ಪರಿಣಾಮವನ್ನು ಬೀರುತ್ತದೆ. ಮಾತು ಬಲ್ಲವನು ಎಲ್ಲರ ಹೃದಯವನ್ನು ಗೆಲ್ಲುವನು. ಆ ವ್ಯಕ್ತಿಯು ನುಡಿದಂತಹ ಮಾತುಗಳು ಕೇಳುವವರ ಮನವನ್ನು ಸೂರೆಗೊಳ್ಳುತ್ತದೆ. ಇನ್ನೂ ಕೇಳುತ್ತಲೇ ಇರಬೇಕು ಎನ್ನುವಂತೆ ಮೋಡಿ ಮಾಡಿ ಬಿಡುತ್ತವೆ. ಕೇಳುಗರು ಅರಿವಿಲ್ಲದೇ ಆ ಮಾತುಗಳಿಗೆ ಮಾರುಹೋಗಿ ಅದನ್ನು ಅನುಸರಿಸುವವರೂ ಇದ್ದಾರೆ. ಇದು ಆ ವ್ಯಕ್ತಿಯು ಆಡಿದ ಮಾತಿನ ವಿಷಯ ಹಾಗೂ ಶೈಲಿಯನ್ನು ಆದರಿಸಿರುತ್ತದೆ. ಸತ್ವಪೂರ್ಣ ಮಾತುಗಳು ಎಂದಿಗೂ ಉತ್ತಮ ಮಹತ್ವವನ್ನು ಪಡೆದುಕೊಳ್ಳುತ್ತದೆ.

ನಾವು ಆಡುವ ಮಾತುಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಚೈತನ್ಯ ತುಂಬಲು ನಾವು ಆಡುವ ಮಾತುಗಳಲ್ಲಿ ಶಕ್ತಿ ಇರುತ್ತದೆ. ಬದುಕಿನಲ್ಲಿ ಸೋತು ಹೋದೆ ಇನ್ನು ನನ್ನಿಂದ ಸಾಧ್ಯವೇ ಇಲ್ಲ ಎನ್ನುವ ವ್ಯಕ್ತಿ ಕೂಡಾ ನಮ್ಮ ಸಾಂತ್ವನದ ನುಡುಗಳನ್ನು ಕೇಳಿ ಜೀವನೋತ್ಸಾಹ ಪಡೆದುಕೊಳ್ಳುವನು. ಅದೇ ನಿರಾಶಾದಾಯಕ ಮಾತುಗಳನ್ನು ಆ ವ್ಯಕ್ತಿ ಆಡಿದಂತೆ ನಾವೂ ಆಡಿದರೆ ಇನ್ನೂ ಕುಗ್ಗಿ ಹೋಗಿ ಇರುವ ಅಲ್ಪ ಸ್ವಲ್ಪ ಉತ್ಸಾಹವನ್ನು ಕೂಡಾ ಕಳೆದುಕೊಳ್ಳುತ್ತಾನೆ. ಹಾಗಾಗಿ ಜೀವನೋತ್ಸಾಹ ತುಂಬುವಂತಹ ಮಾತುಗಳನ್ನು ನಾವು ಆಡಬೇಕೇ ಹೊರತು ಉತ್ಸಾಹವನ್ನು ಕುಗ್ಗಿಸುವ ಮಾತುಗಳನ್ನು ಆಡಬಾರದು.

ಈ ಲೋಕದಲ್ಲಿ ಇರುವಂತಹ ಪ್ರತೀ ಜೀವಿಯಲ್ಲೂ ಕುಂದು ಕೊರತೆಗಳು ಇದ್ದೇ ಇರುತ್ತವೆ. ಸೃಷ್ಟಿಯಲ್ಲಿ ಸಂಪೂರ್ಣತೆ ಪಡೆದಿರುವ ಯಾವುದೇ ಜೀವಿಯೂ ಇಲ್ಲಿ ಇಲ್ಲ. ಆದರೆ ನಮ್ಮಲ್ಲಿರುವ ಕುಂದು ಕೊರತೆಗಳನ್ನು ಮರೆತು ಇನ್ನೊಬ್ಬರ ಮನನೋಯಿಸುವಂತೆ ಮಾತುಗಳಾಡುವುದು ಸರಿಯಲ್ಲ.

ಮಾತನಾಡುವ ಶಕ್ತಿಯನ್ನು ಆ ಭಗವಂತನು ವರವಾಗಿ ಕೊಟ್ಟಿರುವನು. ಆತನ ಸೃಷ್ಟಿಯಲ್ಲಿನ ಇತರೆ ಎಲ್ಲಾ ಜೀವಿಗಳಿಗಿಂತ ಭಿನ್ನ ರೀತಿಯಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ಸಂವಹನಕ್ಕಾಗಿ ಮಾತನಾಡುವ ಶಕ್ತಿಯನ್ನು ನಮಗೆ ಬಳುವಳಿಯಾಗಿ ಕೊಟ್ಟಿರುವನು. ಅದನ್ನು ನಾವು ಒಳಿತಿಗಾಗಿ ಉಪಯೋಗಿಸಿದರೆ ಮಹತ್ತರ ಕಾರ್ಯಗಳನ್ನು ಮಾಡಬಹುದು.

ಕೆಲವೊಮ್ಮೆ ಮೌನವು ಒಳಿತೆಂದು ಅನಿಸಿದರೂ ಅತಿಯಾದ ಮೌನವೂ ಕೂಡಾ ಒಳ್ಳೆಯದಲ್ಲ. ಸಮಯ ಸಂದರ್ಭಕ್ಕನುಗುಣವಾಗಿ ಮಾತನಾಡುವುದು ಉಚಿತ. ಕೆಲವೊಮ್ಮೆ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮಾತಿನ ಅಗತ್ಯವಿರುತ್ತದೆ. ಮಾತಿನ ಮಹತ್ವದ ಅರಿತಿವಿರುವ ವ್ಯಕ್ತಿಯು ವಾಕ್ಚಾತುರ್ಯದಿಂದ

ಎಲ್ಲರ ಮನ ಗೆಲ್ಲುವನು. ಮಾತು ಎನ್ನುವುದು ನಮಗೊಂದು ವರದಾನವಿದ್ದಂತೆ. ಮಾತನಾಡುವುದು ಕೂಡಾ ಒಂದು ಕಲೆ. ತಿಳಿಸಬೇಕಾದಂತಹ ವಿಷಯವನ್ನು ಮನದಟ್ಟಾಗುವಂತೆ ಹೇಳುವುದು ಕೂಡಾ ಮಾತಿನ ಮುಖಾಂತರವೇ. ಕೆಲವೊಮ್ಮೆ ಮಾತನಾಡಬೇಕಾದ ಸಂದರ್ಭದಲ್ಲಿ ಮಾತನಾಡದೇ ಇರುವುದರಿಂದಲೂ ನಮಗೆ ಭರಿಸಲಾರದ ನಷ್ಟವೂ ಉಂಟಾಗುತ್ತದೆ. ಒಮ್ಮೊಮ್ಮೆ ಇನ್ನೊಮ್ಮೆ ಹೇಳೋಣ ಎಂದು ಹೇಳದೇ ಮನದಲ್ಲಿ ಇಟ್ಟುಕೊಂಡ ಮಾತುಗಳು ಹೇಳಲಾರದೇ ಅಲ್ಲಿಯೇ ಉಳಿಯುವ ಸಂಭವವೂ ಇರುತ್ತದೆ.

ಮಾತನಾಡುವ ಶಕ್ತಿಯನ್ನೇ ನಾವು ಬಂಡವಾಳವಾಗಿ ಇರಿಸಿಕೊಂಡು ಬೇಕಾದಂತೆ ಮಾತನ್ನು ಬದಲಾಯಿಸುವ ಚಾಕಚಕ್ಯತೆಯನ್ನು ಕೂಡಾ ಹೊಂದಿದ್ದೇವೆ. ಮಾತನಾಡಲು ಬರುವುದು ಎಂದು ಮತ್ತೊಬ್ಬರ ಹೃದಯ ಒಡೆಯುವಂತಹ ಮಾತನ್ನು ಆಡುವುದು ಕೂಡಾ ಮಹಾ ಅಪರಾಧವಾಗುತ್ತದೆ. ಮಾತಿನಿಂದ ಮನಸ್ಸನ್ನು ಗೆಲ್ಲಬಹುದು ಹಾಗೂ ಮಾತಿನ ಧಾಟಿಯಿಂದ ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಬಹುದು. ಮಾತುಗಳು ಕುಟುಂಬಗಳನ್ನು ಒಡೆಯುತ್ತವೆ ಹಾಗೂ ಒಡೆದ ಕುಟುಂಬಗಳನ್ನು ಕೂಡಾ ಒಂದಾಗಿಸುತ್ತದೆ. ಇಲ್ಲಿ ನಾವು ಆಡುವ ಮಾತಿನ ಉದ್ದೇಶವನ್ನು ಆದರಿಸಿ ಪರಿಣಾಮವು ಗೋಚರಿಸುತ್ತದೆ.

ಯಾವುದೇ ವಿಷಯವನ್ನು ಸರಿಯಾಗಿ ಅರಿಯದೇ ಅರ್ಥಮಾಡಿಕೊಳ್ಳದೇ ಮಾತುಗಳನ್ನು ಆಡುವುದು ಕೂಡಾ ತಪ್ಪು. ಹಾಗೆಯೇ ಯಾರಬಗ್ಗೆಯೂ ತಿಳಿಯದೆಯೇ ಮನಸ್ಸಿಗೆ ಬಂದಂತೆ ಮಾತನಾಡುವುದು ಕೂಡಾ ತಪ್ಪು ಗಾಳಿ ಮಾತುಗಳು ಎಷ್ಟೋ ಬಾರಿ ಹಲವರ ಜೀವನವನ್ನು ಹಾಳು ಮಾಡುತ್ತವೆ. ಯಾವುದೇ ವಿಷಯ ಅಥವಾ ವ್ಯಕ್ತಿಯ ಬಗ್ಗೆ ಮಾತನಾಡುವಾಗ ತಿಳಿದು ಮಾತನಾಡುವುದು ಒಳಿತು. ಇಲ್ಲದಿದ್ದರೆ ತಪ್ಪು ಅಭಿಪ್ರಾಯ ಎಲ್ಲೆಡೆ ಹರಡುವ ಸಂಭವ ಇರುತ್ತದೆ. ಹಾಗಾಗಿ ನಾವು ಮಾತನಾಡುವಾಗ ಚೆನ್ನಾಗಿ ಆಲೋಚಿಸಿ ಮಾತನಾಡುವುದು ಒಳಿತು. ಇಂದು ನಾವು ಇನ್ನೊಬ್ಬರನ್ನು ನೋಯಿಸಲು ನಮ್ಮ ಮಾತಿನ ಬಾಣಗಳನ್ನು ಉಪಯೋಗಿಸಿದರೆ ಅದು ಇನ್ನೊಂದು ದಿನ ತಿರುಗಿ ನಮಗೇ ಬರುತ್ತದೆ. ಆದಷ್ಟೂ ಇತರರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡೋಣ. ನಾವು ಆಡುವ ಮಾತುಗಳು ನಮ್ಮ ಗುಣವನ್ನು ತೋರಿಸುತ್ತದೆ.

ಮಾತೇ ಮುತ್ತು ಹಾಗೂ ಮಾತೇ ಮೃತ್ಯು.

ರುಕ್ಮಿಣಿ ಎಸ್ ನಾಯರ್ 

ಬೆಂಗಳೂರು.

 

 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here