Views: 0
ಬಳ್ಳಾರಿ, ಜೂ.01:
ತಂಬಾಕು ಜಗಿಯುವುದರಿಂದ ಬಾಯಿ ಮತ್ತು ವಸಡಿನ ಕ್ಯಾನ್ಸರ್ ಬರುತ್ತದೆ. ಹಾಗಾಗಿ ತಂಬಾಕು ಉತ್ಪನ್ನಗಳಿಂದ ದೂರವಿರಬೇಕು ಎಂದು ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರೂಪನಗುಡಿ ಸಮುದಾಯ ಆರೋಗ್ಯ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು” ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣ ಬಾಬು ಅವರು ಮಾತನಾಡಿ, ತಂಬಾಕು ಮತ್ತು ಧೂಮಪಾನ ಮಾಡುವುದರಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಎನ್ಸಿಡಿ ವಿಭಾಗದ ಆಪ್ತ ಸಮಾಲೋಚಕ ಅನಿಲ್ ಕುಮಾರ್ ಅವರು ಮಾತನಾಡಿ, ತಂಬಾಕಿನ ಉತ್ಪನ್ನಗಳನ್ನು ಜಗಿಯುವುದರಿಂದ ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಬಿಡಿ, ಸಿಗರೇಟ್ ಸೇದುವ ಹಾಗೂ ತಂಬಾಕು ಜಗಿಯುವ ಗಂಡಸರಲ್ಲಿ ವೀರ್ಯಾಣುಗಳ ಪ್ರಮಾಣ ಕಡಿಮೆಗೊಳ್ಳುವುದರಿಂದ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತದೆ ಎಂದು ತಿಳಿಸಿದರು.
ಧೂಮಪಾನ ಮಾಡುವುದರಿಂದ ರಕ್ತ ನಾಳಗಳು ಗಾತ್ರದಲ್ಲಿ ಕುಗ್ಗುತ್ತವೆ. ಹಾಗಾಗಿ ವ್ಯಕ್ತಿಯು ಅಧಿಕ ರಕ್ತದೊತ್ತಡದಿಂದ ನರಳುವ ಸಂಭವವುಂಟು ಎಂದು ಅವರು ಹೇಳಿದರು.
ಜಾಗೃತಿ ಜಾಥಾವು ಗ್ರಾಮದ ಪ್ರತಿ ಬೀದಿಗಳಲ್ಲಿ ಸಂಚರಿಸಿ, ತಂಬಾಕು ಮತ್ತು ಧೂಮಪಾನದಿಂದ ಆಗುವ ದುಷ್ಪರಿಣಾಮಗಳನ್ನು ಮೈಕ್ ಧ್ವನಿ ವರ್ಧಕದ ಮೂಲಕ ತಿಳಿಸಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.
ಈ ವೇಳೆ ಹೆಚ್ಐಓ ವೈ.ವೀರಾರೆಡ್ಡಿ, ದಂತ ವೈದ್ಯಾಧಿಕಾರಿ ಡಾ.ಪ್ರಿಯಾಂಕಾ ರೆಡ್ಡಿ, ಹೆಚ್.ಐ.ಓ, ಪಿ.ಹೆಚ್.ಸಿ.ಓ, ಸಿ.ಹೆಚ್.ಓ, ಎನ್.ಸಿ.ಡಿ ಸಿಬ್ಬಂದಿ ವರ್ಗದವರು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.