ಜೀವನ ಭೀಮಾನಗರ ಪೋಲೀಸ್ ಠಾಣೆಯಲ್ಲಿ ನಡೆದಿದ್ದ ಮಹೇಂದ್ರ ರಾಥೋಡ್ ರವರ ಲಾಕಪ್‍ಡೆತ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಂಗಳೂರು, ನವೆಂಬರ್ 27
ಬೆಂಗಳೂರು ನಗರ, ಜೀವನ ಭೀಮಾನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ: 89/2016 ಕಲಂ 381 ಐ.ಪಿ.ಸಿ ಕಳ್ಳತನ ಪ್ರಕರಣದಲ್ಲಿ 2016 ನೇ ಮಾರ್ಚ್ 19 ರಂದು ಪೋಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ಗುಮಾನಿ ಆಸಾಮಿ ಮಹೇಂದ್ರ ರಾಥೋಡ್ ಈತನಿಗೆ ಸದರಿ ಪೋಲೀಸ್ ಠಾಣೆಯ ಅಪರಾಧ ವಿಭಾಗ ಸಿಬ್ಬಂದಿಗಳಾದ ಏಜಾಜ್ ಖಾನ್, ಸಿ.ಹೆಚ್.ಸಿ-6794, ಕೇಶವ ಮೂರ್ತಿ, ಸಿ.ಪಿ.ಸಿ-11630, ಮೋಹನ್ ರಾಮ್, ಸಿ.ಪಿ.ಸಿ-8858 ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ, ಸಿ.ಪಿ.ಸಿ-12509 ರವರು ಆರೋಪಿತನಿಗೆ ನಿರ್ಲಕ್ಷ್ಯತೆಯಿಂದ ದೈಹಿಕವಾಗಿ ಹಲ್ಲೆ ಮಾಡಿದ್ದರ ಪರಿಣಾಮವಾಗಿ ಆತನು ಪೋಲೀಸ್ ವಶದಲ್ಲಿದ್ದಾಗ ಮೃತಪಟ್ಟಿರುವುದು ಸಿ.ಐ.ಡಿ ತನಿಖೆಯಲ್ಲಿ ದೃಢಪಟ್ಟಿರುತ್ತದೆ. ಈ ಕುರಿತು ಆರೋಪಿಗಳ ವಿರುದ್ಧ ಸಿ.ಐ.ಡಿ ತನಿಖಾಧಿಕಾರಿಗಳು ಜೀವನ ಭೀಮಾನಗರ ಪೋಲೀಸ್ ಠಾಣೆಯಲ್ಲಿ ಮೊ.ಸಂ: 65/2017 ಕಲಂ: 304, 324, 326, 330 ರೆ/ವಿ 34 ಐ.ಪಿ.ಸಿ. ಅಡಿ 2017ನೇ ಫೆಬ್ರವರಿ 13 ರಂದು ದೂರು ಸಲ್ಲಿಸಿದ್ದರು.
ಈ ಪ್ರಕರಣದ ತನಿಖೆಯನ್ನು ಸಹ ಸಿ.ಐ.ಡಿಯಲ್ಲಿ ಮುಂದುವರೆಸಿ ಮೃತನ ಸಾವಿಗೆ ಕಾರಣಕರ್ತರಾದ ಆರೋಪಿಗಳ ವಿರುದ್ಧ 2019 ನೇ ಜುಲೈ 18 ರಂದು ಕಲಂ: 304, 324, 326, 330 ರೆ/ವಿ 34 ಐ.ಪಿ.ಸಿ ರೀತ್ಯಾ ಬೆಂಗಳೂರು ನಗರದ ಘನ 1ನೇ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಸಿ.ಸಿ. ನಂ. 19485/2019 ರಲ್ಲಿ ವಿಚಾರಣೆ ಕೈಗೊಂಡಿದ್ದರು.
ಘನ 51ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಸಿ.ಐ.ಡಿ ವಿಶೇಷ ನ್ಯಾಯಾಲಯ), ಬೆಂಗಳೂರು ನಗರ (ಸಿ.ಸಿ.ಹೆಚ್-52) ರವರು ಎಸ್.ಸಿ ನಂ. 1723/2019 ರಲ್ಲಿ ವಿಚಾರಣೆಯನ್ನು ಕೈಗೊಂಡು ಮೃತ ಮಹೇಂದ್ರ ರಾಥೋಡ್ ಈತನ ಸಾವಿಗೆ ಕಾರಣಕರ್ತರಾದ ಜೀವನ ಭೀಮಾನಗರ ಪೊಲೀಸ್ ಠಾಣೆಯ ಏಜಾಜ್ ಖಾನ್, ಸಿ.ಹೆಚ್.ಸಿ-6794, ಕೇಶವ ಮೂರ್ತಿ, ಸಿ.ಪಿ.ಸಿ-11630. ಮೋಹನ್ ರಾಮ್, ಸಿ.ಪಿ.ಸಿ-8858 ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ, ಸಿ.ಪಿ.ಸಿ-12509 ರವರುಗಳಿಗೆ ದಿನಾಂಕ: 26.11.2024 ರಂದು ಕಲಂ 304 (II) ಐ.ಪಿ.ಸಿ ಅಪರಾಧಕ್ಕಾಗಿ 07 ವರ್ಷಗಳ ಶಿಕ್ಷೆ ಮತ್ತು ರೂ. 30,000/- ದಂಡ ಹಾಗೂ ಕಲಂ 330 ಐ.ಪಿ.ಸಿ ಅಪರಾಧಕ್ಕಾಗಿ 05 ವರ್ಷಗಳ ಶಿಕ್ಷೆ ಮತ್ತು ರೂ. 25,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ಕೃಷ್ಣವೇಣಿ ರವರು ಘನ ನ್ಯಾಯಾಲಯದಲ್ಲಿ ಸಮರ್ಪಕವಾಗಿ ಪ್ರತಿನಿಧಿಸಿ ಸಮರ್ಥವಾದ ವಾದ ಮಂಡಿಸಿ ಈ ಪ್ರಕರಣವು ಶಿಕ್ಷೆಯಲ್ಲಿ ಅಂತ್ಯವಾಗುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಪ್ರಕಟಣೆ ತಿಳಿಸಿದೆ.