ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಐದು ದಿನಗಳ “ರಾಜ್ಯ ಮಟ್ಟದ ಯುವಜನೋತ್ಸವ”

0
40
Share this Article
0
(0)
Views: 0
 
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಐದು ದಿನಗಳ “ರಾಜ್ಯ ಮಟ್ಟದ ಯುವಜನೋತ್ಸವ”
ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರಾಷ್ಟ್ರೀಯ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ: ಕುಲಪತಿ ಪ್ರೊ.ಮುನಿರಾಜು
 
ಬಳ್ಳಾರಿ,ಆ.28
 
ವಿಶ್ವವಿದ್ಯಾಲಯ ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದಂತೆ, ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡಲು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರಾಷ್ಟ್ರೀಯ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಲಾಗುವುದು ಎಂದು ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮoದಿರದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ(27 ರಿಂದ 31ರ ವರೆಗೆ) “ರಾಜ್ಯ ಮಟ್ಟದ ಯುವಜನೋತ್ಸವ-2024” ಕಾರ್ಯಕ್ರಮವನ್ನು ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಯೋಗ, ವ್ಯಾಯಾಮ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳು ಸಹಕಾರಿಯಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ವಿವಿಯಲ್ಲಿ ಗಿಡ ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
 
ರಾಜ್ಯ ಎನ್‌ಎಸ್‌ಎಸ್ ಹಾಗೂ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯುವಕರು ಭಾರತದ ಪ್ರೇರಕ ಶಕ್ತಿಯಾಗಿದ್ದಾರೆ. ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ಕೊಡುಗೆ ನೀಡುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
 
ದೈಹಿಕ, ಮಾನಸಿಕ ಸದೃಢತೆ ವಿದ್ಯಾರ್ಥಿಗಳು ಕಲಿತುಕೊಂಡಲ್ಲಿ ಸಾಮಾಜಿಕ ಸದೃಢತೆ ತಾನಾಗಿಯೇ ನಿರ್ಮಾಣವಾಗುತ್ತದೆ. ಇದನ್ನು ಎನ್‌ಎಸ್‌ಎಸ್ ಶಿಬಿರಗಳು ಕಲಿಸಿಕೊಡುತ್ತವೆ. ದೇಶದಲ್ಲಿಯೇ ಹೆಚ್ಚು ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಹೊಂದಿರುವ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.
ಕುಲಸಚಿವ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಶ್ರಮದಾನ ಕಾರ್ಯದಿಂದ ಇಂದು ವಿಶ್ವವಿದ್ಯಾಲಯವು ಹಸಿರಿನಿಂದ ಕಂಗೊಳಿಸುತ್ತಿದೆ. ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಯೋಚನೆಗಳು ಮೂಡುವಂತೆ ಉತ್ತೇಜಿಸುತ್ತವೆ ಎಂದು ಹೇಳಿದರು.
 
ನಮ್ಮಲ್ಲಿರುವ ಹಲವಾರು ದೇಸಿ ಕಲೆಗಳನ್ನು ವಿದ್ಯಾರ್ಥಿಗಳಿಗೆ ಇಂದು ಪರಿಚಯಿಸಬೇಕಾಗಿದೆ. ಅದಕ್ಕಾಗಿಯೇ 5 ದಿನಗಳ ಯುವಜನೋತ್ಸವದಲ್ಲಿ ತೊಗಲುಗೊಂಬೆ ಆಟ, ಕೈಗೊಂಬೆ ಆಟ, ಜಾನಪದ ನಾಟಕ, ತಬಲಾ ಜುಗಲ್‌ಬಂದಿ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ತಿಳಿಸಿದರು.
ವಿವಿಯ ನಿಕಟಪೂರ್ವ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯನ್ನು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳಿಗೂ ಇದರ ಮಹತ್ವವನ್ನು ತಿಳಿಸಿಕೊಡಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಶಿಬಿರದಲ್ಲಿ ರಾಜ್ಯದ 21 ವಿಶ್ವವಿದ್ಯಾಲಯಗಳಿಂದ ಆಗಮಿಸಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
 
ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತಾದ ಜಪಾನ್ ಮಾದರಿಯ ಗೊಂಬೆ ನಾಟಕ ಜರುಗಿತು.
ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ.ಶಶಿಧರ ಕೆಲ್ಲೂರ ನಿರೂಪಿಸಿದರು. ಡಾ.ನಾಗರಾಜ ದಂಡೊತಿ ವಂದಿಸಿದರು.
 
ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here