ಬಳ್ಳಾರಿ,ಜೂ.13:
ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಮಕ್ಕಳಿಗೆ ಕೃಷಿ ಇಲಾಖೆ ವತಿಯಿಂದ ಮಣ್ಣು ಆರೋಗ್ಯ ಹಾಗೂ ಪರೀಕ್ಷಾ ವಿಶ್ಲೇಷಣೆ ಕುರಿತು ಬುಧವಾರದಂದು ತರಬೇತಿ ನೀಡಲಾಯಿತು.
ಪ್ರಸ್ತಕ ಸಾಲಿನಲ್ಲಿ ಕೇಂದ್ರ ಪುರಸ್ಕøತ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಮಣ್ಣು ಆರೋಗ್ಯ ಅಭಿಯಾನ ಕುರಿತು ಕಾರ್ಯಕ್ರಮ ಆಯೋಜಿಸಿದ್ದು, 6 ನೇ ತರಗತಿಯಿಂದ 12 ನೇ ತರಗತಿಯ ವರೆಗಿನ ಮಕ್ಕಳಿಗೆ ಮಣ್ಣು ಆರೋಗ್ಯದ ಕುರಿತು ತರಬೇತಿ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ (ವಿಷಯ ತಜ್ಞರು) ಮೊಹಮ್ಮದ್ ರಫೀವುಲ್ಲಾ ರಜ್ವಿ ಅವರು, ಮಣ್ಣು ಆರೋಗ್ಯದ ಬಗ್ಗೆ ಮಾತನಾಡಿ, ಬೆಳೆಗೆ ಬೇಕಾಗಿರುವ 17 ಪೋಷಕಾಂಶಗಳ ಮಹತ್ವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು. ಮಣ್ಣಿನ ಗುಣಧರ್ಮದ ಆಧಾರದ ಮೇರೆಗೆ ರಸಗೊಬ್ಬರಗಳನ್ನು ಬಳಸಬೇಕು ಎಂದು ತಿಳಿಸಿದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ.ಎಸ್.ರವಿ ಅವರು ಮಣ್ಣು ಪರೀಕ್ಷಾ ವಿಧಾನ ಮತ್ತು ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿದರು.
ಮಕ್ಕಳಿಗೆ ಮಣ್ಣು ಮಾದರಿ ಸಂಗ್ರಹಿಸುವ ವಿಧಾನವನ್ನು ಕ್ಷೇತ್ರಮಟ್ಟದಲ್ಲಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿದರು.
ಕಾರ್ಯಕ್ರಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಮಾರೆಪ್ಪ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರಾದ ಕವಿತಾ ಕುಮಾರಿ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ವಾಣಿ ಕೋರಪ್ಪಳ, ಕೃಷಿ ಸಂಜೀವಿನಿಯ ತಾಂತ್ರಿಕ ಸಹಾಯಕ ಮಣಿಕೃಷ್ಣ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.