ಬೆಂಗಳೂರು, ಜೂನ್ 25:
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ 2028ನೇ ಜೂನ್ 16ರ ವರೆಗೆ ಅವಧಿ ಹೊಂದಿದ್ದ ಜಗದೀಶ್ ಶೆಟ್ಟರ್ ಅವರು 2024ನೇ ಜನವರಿ 25ರಂದು ರಾಜೀನಮೆ ನೀಡಿದ ಕಾರಣಕ್ಕಾಗಿ ತೆರವಾದ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನು ತುಂಬಲು ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿಗೆ ಉಪಚುನಾವಣೆಯನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ 2024ನೇ ಜೂನ್ 25ರಂದು ಅಧಿಸೂಚನೆಯನ್ನು ಹೊರಡಿಸಿ, ನಾಮಪತ್ರಗಳನ್ನು ಸಲ್ಲಿಸಲು 2024ನೇ ಜುಲೈ 02 ಕೊನೆಯ ದಿನವಾಗಿದೆ.
ನಾಮಪತ್ರಗಳ ಪರಿಶೀಲನೆಯನ್ನು 2024ನೇ ಜುಲೈ 03ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು 2024ನೇ ಜುಲೈ 05 ಕೊನೆಯ ದಿನಾಂಕವಾಗಿದೆ. ಮತದಾನವನ್ನು 2024ನೇ ಜುಲೈ 12ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆಸಲಾಗುವುದು ಮತ್ತು ಅದೇ ದಿನ ಸಂಜೆ 5.00 ಗಂಟೆಗೆ ಮತ ಎಣಿಕೆ ನಡೆಸಲಾಗುವುದು. 2024ನೇ ಜುಲೈ 16ರಂದು ಚುನಾವಣೆಯು ಮುಕ್ತಾಯವಾಗಲಿದೆ.
ಸದರಿ ಉಪ ಚುನಾವಣೆಗೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಕೆ. ವಿಶಾಲಾಕ್ಷಿ ಅವರು ಚುನಾವಣಾಧಿಕಾರಿಯಾಗಿ ಹಾಗೂ ನಿರ್ದೇಶಕಾರದ ಬಿ.ಎಸ್. ಮಹಾಲಿಂಗೇಶ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.
ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು 2024ನೇ ಜೂನ್ 25ರಿಂದ 2024ನೇ ಜುಲೈ 02ರ ವರೆಗೆ (ಎರಡು ದಿನಗಳು ಸೇರಿದಂತೆ) ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ (ಸಾರ್ವತ್ರಿಕ ರಜಾ ದಿನವಾದ 2024ನೇ ಜೂನ್ 30ರ ಭಾನುವಾರವನ್ನು ಹೊರತುಪಡಿಸಿ) ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದಾಗಿರುತ್ತದೆ.
ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2 ಡಿ ಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಠ 10 ಜನ ಹಾಲಿ ವಿಧಾನಸಭಾ ಸದಸ್ಯರ ಸಹಿ ಮಾಡಿರಬೇಕು. ಈ ಸಂಬಂಧದಲ್ಲಿ 1951ನೇ ಇಸವಿಯ ಪ್ರಜಾಪ್ರಾತಿನಿಧ್ಯ ಅಧಿನಿಯಮದ 34(1)(ಬಿ)ಯೊಂದಿಗೆ ಓದಲಾದ ಪ್ರಕರಣ 39(2)ಕ್ಕೆ ಅಭ್ಯರ್ಥಿಗಳ ಗಮನವನ್ನು ಸೆಳೆಯಲಾಗಿದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ ರೂ. 5000/- ಹಾಗೂ ಇತರೆಯವರು ರೂ. 10000/-ಗಳನ್ನು ಠೇವಣಿಯಾಗಿ ಇಡಬೇಕು.
ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳಾದ ಎಂ.ಕೆ. ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.