Views: 0
ಧಾರವಾಡ ಮೇ.28:
ಧಾರವಾಡ ಸರಸ್ವತಪುರದ ನಿವಾಸಿಯಾಗಿದ್ದ ಪ್ರಶಾಂತ ಶಾನಬಾಗ ಅನ್ನುವವರು ತನ್ನ ದ್ವಿ ಚಕ್ರ ವಾಹನದ ಮೇಲೆ ಪಿ.ಎ. ಕವರೇಜ್ ಸಮೇತ ವಿಮೆ ಮಾಡಿಸಿದ್ದರು. ಯಾವುದೇ ಅಪಘಾತದಿಂದ ವಿಮಾದಾರ ಮೃತನಾದಲ್ಲಿ ಅವನ ಅವಲಂಬಿತರಿಗೆ ರೂ.15 ಲಕ್ಷ ಪರಿಹಾರ ಕೊಡಲು ವಿಮಾ ಪಾಲಸಿಯಲ್ಲಿ ನಿಯಮ ಇತ್ತು. ಈ ಬಗ್ಗೆ ವಿಮಾದಾರ ಎದುರುದಾರ ವಿಮಾ ಕಂಪನಿಗೆ ರೂ.1489/- ಪ್ರಿಮಿಯಮ್ ಹಣ ಸಂದಾಯ ಮಾಡಿದ್ದರು. ದಿ:11/10/2022 ರಂದು ವಿಮಾದಾರ/ಮೃತ ಪ್ರಶಾಂತ ವಾಹನ ಅಪಘಾತದಲ್ಲಿ ತೀವ್ರಗಾಯಗೊಂಡು ಮೃತರಾಗಿದ್ದರು. ಈ ಬಗ್ಗೆ ವಾಹನ ಚಾಲಕನ ಮೇಲೆ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿತ್ತು. ಆ ಎಲ್ಲ ದಾಖಲೆಗಳ ಸಮೇತ ಮೃತ ಪ್ರಶಾಂತನ ಹೆಂಡತಿ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿರವರು ತಾವು ಮೃತನ ಸರಳ ವಾರಸುದಾರರಿದ್ದು ತಮಗೆ ರೂ.15 ಲಕ್ಷ ವಿಮಾ ಹಣಕೊಡುವಂತೆ ಎದುರುದಾರ ಆಯ್.ಸಿ.ಆಯ್.ಸಿ.ಆಯ್ ಲೋಂಬಾರ್ಡ ವಿಮಾ ಕಂಪನಿಗೆ ಕ್ಲೇಮಅರ್ಜಿ ಸಲ್ಲಿಸಿದ್ದರು.ಮೃತ ಪ್ರಶಾಂತ ಅಪಘಾತ ಕಾಲಕ್ಕೆ ಅಧಿಕೃತ ಚಾಲನಾ ಪತ್ರ ಹೊಂದಿರಲಿಲ್ಲ ಕಾರಣ ಅವನು ವಿಮಾ ಪಾಲಸಿ ಷರತ್ತನ್ನು ಉಲ್ಲಂಘಿಸಿದ್ದಾರೆಂದು ಎದುರುದಾರ ವಿಮಾ ಕಂಪನಿಯವರು ದೂರುದಾರನ ಕ್ಲೇಮನ್ನು ನಿರಾಕರಿಸಿದ್ದರು.
ವಿಮಾ ಕಂಪನಿಗೆ ಹಲವುಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ.್ಲ ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:11/07/2023 ರಂದು ಧಾರವಾಡ ಜಿಲಾ ್ಲಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಸಧ್ಯದ ಮೋಟಾರ ವಾಹನ ಕಾಯ್ದೆಯ ನಿಯಮದಂತೆ ಅಪಘಾತವಾದ ದಿನ 11/10/2022 ರಂದು ಮೃತ ಪ್ರಶಾಂತ ಇವರು ಚಾಲನಾ ಪತ್ರ ಹೊಂದಿರುವುದು ಕಂಡು ಬರುತ್ತದೆ. ಹೊಸ ಮೋಟಾರ ವಾಹನ ಕಾಯ್ದೆಯ ನಿಯಮವನ್ನು ಅರ್ಥೈಸುವಲ್ಲಿ ಎದುರುದಾರ ವಿಮಾ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಮೃತ ಅಧಿಕೃತ ಚಾಲನಾ ಪತ್ರ ಹೊಂದಿದ್ದರೂ ದೂರುದಾರರ ವಿಮಾ ಕ್ಲೇಮನ್ನು ತಿರಸ್ಕರಿಸಿರುವುದು ವಿಮಾ ನಿಯಮಗಳಿಗೆ ವಿರುದ್ಧವಾಗುತ್ತದೆ ಮತ್ತು ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯ ಉಲ್ಲಂಘನೆಯು ಆಗುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದರಿಂದ ಎದುರುದಾರ ಆಯ್.ಸಿ.ಆಯ್.ಸಿ. ಲೋಂಬಾರ್ಡ ವಿಮಾ ಕಂಪನಿಯವರು ದೂರುದಾರರಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿರುವುದರಿಂದ ವಿಮೆ ತಿರಸ್ಕರಿಸಿದ ದಿನಾಂಕದಿಂದ ಶೇ8% ರಂತೆ ಬಡ್ಡಿ ಸಮೇತ ರೂ.15 ಲಕ್ಷ ವಿಮಾ ಹಣ ದೂರುದಾರರಿಗೆ ನೀಡುವಂತೆ ಆಯೋಗ ಆದೇಶಿಸಿದೆ. ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ಅವರಿಗೆ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯ್.ಸಿ.ಆಯ್.ಸಿ.ಆಯ್ ಲೋಂಬಾರ್ಡಎದುರುದಾರ ವಿಮಾ ಕಂಪನಿಯವರಿಗೆ ಆಯೋಗ ನಿರ್ದೇಸಿದೆ.