ಶಾಲಾ-ಕಾಲೇಜು ಆವರಣದಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ : ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

0
324
Share this Article
0
(0)
Views: 299
 

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 07 

ಶಾಲಾ-ಕಾಲೇಜುಗಳ ಆವರಣಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಶಾಲೆಗಳಿಂದ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಪ್ರದೇಶಗಳು ಕಂಡುಬರದಂತೆ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ‌ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ತಂಬಾಕು ಮುಕ್ತ ಯುವ ಅಭಿಯಾನ 2.0’ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

2024 ಏಪ್ರಿಲ್ ಮಾಹೆಯಿಂದ ಸೆಪ್ಟೆಂಬರ್ ಮಾಯೆಯ ವರೆಗೆ ಜಿಲ್ಲೆಯಲ್ಲಿ ತಂಬಾಕು ತ್ಯಜಿಸಿದ ರೋಗಿಗಳ ಸಂಖ್ಯೆ 265 ಆಗಿದೆ. ಇದೇ ರೀತಿಯಾಗಿ ಇನ್ನು ಹೆಚ್ಚಿನ ಮಟ್ಟದಲ್ಲಿ ತಂಬಾಕನ್ನು ನಿಯಂತ್ರಿಸಲು ಜಿಲ್ಲಾ ಹಾಗೂ ತಾಲ್ಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ಪ್ರವೃತ್ತರಾಗಿ ತಂಬಾಕು ನಿಯಂತ್ರಣಕ್ಕೆ ಕ್ರಮವಹಿಸಲು ತಿಳಿಸಿದರು.

*ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ 2003ರ ಕಾಯ್ದೆ* ಬಗ್ಗೆ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಗಡಿಗಳಲ್ಲಿ ಕೈಗಾರಿಕೆಗಳಲ್ಲಿ ತಂಬಾಕು ಸೇವನೆ ನಿಷೇಧ ಬಗೆಗಿನ ನಾಮಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಯಾರು ಪ್ರದರ್ಶಿಸುತ್ತಿಲ್ಲ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು , ತಂಬಾಕು ವ್ಯಸನೆಯಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಂಬಾಕು ನಿಯಂತ್ರಣ ಕಾನೂನು- ಕೊಟ್ಪಾ 2003ರ ಕಾಯ್ದೆಯಂತೆ ಸೆಕ್ಷನ್ 04 ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಲೀಕರು ನಾಮಫಲಕಗಳನ್ನು ಪ್ರದರ್ಶಿಸಬೇಕು. ಸೆಕ್ಷನ್ 05 ರ ಅಡಿಯಲ್ಲಿ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ, ಪ್ರಾಯೋಜಕತೆ ನಿಷೇಧ ಮಾಡಲಾಗಿದೆ. ಇದರ ಅನ್ವಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಜಾಹೀರಾತುಗಳನ್ನು ಬೋರ್ಡ್, ಭಿತ್ತಿ ಪತ್ರ, ಎಲ್ ಸಿ ಡಿ ಟಿವಿಗಳ ಮೂಲಕ ಪ್ರಚಾರ ಮಾಡುವಂತಿಲ್ಲ, ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡುವಂತಿಲ್ಲ. ಸೆಕ್ಷನ್ 6 ರ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡುವಂತಿಲ್ಲ. ಈ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ದಂಡ ಹಾಗೂ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಸೆಕ್ಷನ್ 06 ಬಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ನೂರು ಅಡಿಯ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್ 07 ರಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಶೇ. 85 ರಷ್ಟು ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಹೇಳಿದರು.
ತಂಬಾಕು ವ್ಯಸನಿಗಳನ್ನು ಹೆಚ್ಚು ಪತ್ತೆ ಮಾಡಿ ಸಮಾಲೋಚನೆ ನಡೆಸಿ, ತಂಬಾಕು ವ್ಯಸನ ಮುಕ್ತರನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದರಲ್ಲದೆ, ಕಾನೂನು ಪಾಲಿಸದೆ ತಂಬಾಕು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಅಂತವರಿಗೆ ಎಚ್ಚರಿಕೆ ನೀಡಿ, ಅಗತ್ಯವಿದ್ದಲ್ಲಿ ಪ್ರಕರಣ ದಾಖಲಿಸಿ ಎಂದು ಹೇಳಿದರು.

ಶಿಕ್ಷಣ ಇಲಾಖೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು ಎಂದರು.

*ಸ್ಟಾಪ್ ಟ್ಯೊಬ್ಯಾಕೋ ಮೊಬೈಲ್ ಆಪ್ ಬಳಸಿ*
ತಂಬಾಕು ನಿಯಂತ್ರಿಸಲು ರೂಪುಗೊಂಡಿರುವ ಸ್ಟಾಪ್ ಟ್ಯೊಬ್ಯಾಕೋ ಆಪ್ ಅನ್ನು ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಹ ಬಳಸಬಹುದಾಗಿದೆ. ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವ ಪ್ರದೇಶದ ಕುರಿತು ಈ ಆಪ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ತಂಬಾಕು ಬಳಕೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

*ಗರ್ಭಿಣಿಯರು, ಮಕ್ಕಳು ಲಸಿಕೆ ಪಡೆಯಿರಿ*

5 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ತಪ್ಪದೇ ನಿಗದಿತ ಸಮಯಕ್ಕೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಡಾಕ್ಟರ್ ಗಳ ಸಲಹೆಯಂತೆ ಲಸಿಕೆಗಳನ್ನು ಹಾಕಿಸಿ ಕೊಳ್ಳಬೇಕು. ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಯಾವ ಹಂತದಲ್ಲಿ ಯಾವ ಲಸಿಕೆ ಹಾಕಿಸಬೇಕು ಎಂಬ ಮಾಹಿತಿ ವೈದ್ಯಾಧಿಕಾರಿಗಳಿಂದ ಪಡೆದು ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ವಿವಿಧ ಖಾಯಿಲೆಗಳು ಬರುವುದನ್ನು, ಸಾವು-ನೋವನ್ನು ತಪ್ಪಿಸಬಹುದು. ಇದುವರೆಗೂ ಲಸಿಕೆ ಪಡೆಯದ, ಲಸಿಕೆ ಪಡೆಯಲು ಬಾಕಿ ಇರುವಂತಹ ಮಕ್ಕಳು ಮತ್ತು ಗರ್ಭಿಣಿಯರ ಮಾಹಿತಿ ಕಲೆ ಹಾಕಿ ಲಸಿಕೆ ಹಾಕಿಸಿ, ವಲಸಿಗರು ವಾಸವಿರುವ ಪ್ರದೇಶ, ನಗರದ ಸ್ಲಂ ಪ್ರದೇಶದಲ್ಲಿ ಹೆಚ್ಚು ಗಮನ ಹರಿಸಿ ಮಕ್ಕಳಿಗೆ, ಗರ್ಭಿಣಿಯರಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭಿಣಿಯರು ಹಾಗೂ ಮಕ್ಕಳ ಸಾವು ಸಂಭವಿಸುವುದನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ, ಶುಷ್ರೂಶಕಿಯರಿಗೆ, ಇತರೆ ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ, ಮಾರ್ಗದರ್ಶನ ನೀಡಿ. ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿಯಾಗಿ ಹೆರಿಗೆಯಾಗುವ ತನಕ ಅವರ ಆರೋಗ್ಯ ಸ್ಥಿತಿ ಗತಿ ಬಗ್ಗೆ ಗಮನ ಹರಿಸುವುದು ಆರೋಗ್ಯಾಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ, ಹಾಗೇಯೇ ಹುಟ್ಟಿದ ಮಗುವಿನಿಂದ 5 ವರ್ಷದ ತನಕ ಮಗುವಿನ ಆರೋಗ್ಯ ಕಾಳಜಿ ಬಗ್ಗೆಯು ಗಮನಹರಿಸಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದಿಲ್ಲ ತತ್ಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ಇದ್ದರೆ ಸಾಕಷ್ಟು ಸಾವು-ನೋವು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯಾಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ. ಕರ್ತವ್ಯ ಲೋಪ ಅಥವಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್, ವಿಶ್ವ ಸಂಸ್ಥೆಯ ಸರ್ವೆಕ್ಷಣಾಧಿಕಾರಿ ಡಾ. ನಾಗರಾಜ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಹೇಮಾವತಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸೀಮಾ ಮಾಬಳೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಲಹೆಗಾರರಾದ ಡಾ‌. ವಿದ್ಯಾರಾಣಿ.ಪಿ.ಎಸ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಶಾಂತಲಾ ಬಿ.ಎನ್, ವಿವಿಧ ಅರೋಗ್ಯ ಕಾರ್ಯಕ್ರಮದ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here