ಬೆಂಗಳೂರು, ಜುಲೈ 06
ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಮೊಬೈಲ್ ಅಪ್ಲಿಕೇಶನ್ ‘ಸಂಚಯ’ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ರಾಜ್ಯ ಪೋಲಿಸ್ ಮಹಾನಿರ್ದೇಶಕರ ಪ್ರಧಾನ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಪೋಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಹಿರಿಯ ಪೋಲೀಸ್ ಅಧಿಕಾರಿಗಳ ಸಮಾವೇಶ ಸಭೆಯಲ್ಲಿ ‘ಸಂಚಯ’ ಮೊಬೈಲ್ ಆಪ್ ಬಿಡುಗಡೆ ಮಾಡಿ ಮಾತನಾಡಿದರು.
ಕರ್ನಾಟಕ ರಾಜ್ಯ ಪೋಲೀಸ್ 1ನೇ ಜುಲೈ 2024 ರಿಂದ ” ಸಂಚಯ” ಮೊಬೈಲ್ ಆಪ್ನ್ನು ಜಾರಿಗೆ ತಂದಿದ್ದು, ಈ ಅಪ್ಲಿಕೇಶನ್ ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳ ಸಂಕಲನವಾಗಿದೆ. ‘ಸಂಚಯ’ ಆಪ್ ಕ್ರಿಮಿನಲ್ ಕಾನೂನುಗಳ ಸಂಪನ್ಮೂಲದ ಕೇಂದ್ರ ಬಿಂದುವಾಗಿ ಹೊರ ಹೊಮ್ಮಲಿದ್ದು, ತತ್ಸಂಬಂಧಿತ ಪಾಲುದಾರರಾದ ನ್ಯಾಯಾಂಗ ಅಭಿಯೋಜಕರು, ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಪೋಲೀಸ್ ಅಧಿಕಾರಿಗಳಿಗೆ ಇತ್ತೀಚಿನ ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವನ್ನು ಹೆಚ್ಚಿರಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿಧಿವಿಜ್ಣಾನ ಪ್ರಯೋಗಾಲಯ ಹಾಗೂ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ತನಿಖಾ ಕೈಪಿಡಿ ಬಿಡುಗಡೆ ಮಾಡಿದರು. ರಿಯಲ್ ಟೈಮ್ ಟ್ರಾಕಿಂಗ್ ಆಪ್ ಹೊಯ್ಸಳ ವಾಹನಗಳ ಹಾಗೂ ಸೇಫ್ ಕನೆಕ್ಟ್ ತಂತ್ರಾಂಶಗಳನ್ನು ಅನಾವರಣಗೊಳಿಸಲಾಯಿತು.
ಸಮಾರಂಭದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಡಾ.ಕೆ.ವಿ. ತ್ರಿಲೋಕಚಂದ್ರ, ಒಳಾಡಳಿತ ಇಲಾಖೆಯ ಉಪಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪೋಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಡಾ. ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಗಳು ಉಪಸ್ಥಿತರಿದ್ದರು.