ಚಿಂತಾಮಣಿ ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿ ಮತ್ತು ದಂಡುಪಾಳ್ಯದ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿದ್ದು ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಅಪಘಾತದ ರಭಸಕ್ಕೆ ಬೈಕ್ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುವ ನಗರದ ಗಾಂಧಿನಗರ ಬಡಾವಣೆಯ ನಿವಾಸಿ 30ವರ್ಷದ ದೇವರಾಜ್ ಬಿನ್ ನರಸಿಂಹಪ್ಪ ಎಂದು ಗುರುತಿಸಲಾಗಿದೆ.
ಅಪಘಾತ ನಡೆಸಿದ ಕಾರು ಚಾಲಕನನ್ನು ಬೆಂಗಳೂರು ನಗರದ ಚಂದ್ರಲೇಔಟ್ ನ ಆರ್.ಮಧುಕುಮಾರ್ ಎಂದು ಗುರುತಿಸಲಾಗಿದೆ, ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯುರು ಸೇರಿದಂತೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರು ಸಹ ಮುಂಭಾಗ ಜಖಂಗೊಂಡಿದ್ದು, ಬೈಕ್‌ಗೆ ಬೆಂಕಿ ತಗಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಬೆಂಗಳೂರಿನ ಚಂದ್ರ ಲೇಔಟ್ ನ ಡಾಕ್ಟರ್ ರಾಮ್ ಎಂಬವರ ಪತ್ನಿ ಆಶಾ ಮತ್ತು ಅವರ ಸ್ನೇಹಿತೆ ಶಿಶಿರಾ ಎಂಬವರು ಬೆಂಗೂರಿನಿಂದ ಮದನಪಲ್ಲಿ ಮಾರ್ಗವಾಗಿ ಕಡಪಾಗೆ ತೆರಳುತ್ತಿದ್ದರೆ, ಬೈಕ್ ಸವಾರ ಮದನಪಲ್ಲಿ ಮುಖ್ಯ ರಸ್ತೆಯ ಮೂಲಕ ಚಿಂತಾಮಣಿ ಕಡೆ ಬರುತ್ತಿದ್ದಾಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಿಳಿಯುತ್ತಿದ್ದಂತೆ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಪಿ ಮುರಳೀಧರ, ಕೆಂಚರ‍್ಲಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟರಾಮಪ್ಪ, ಕೆಂಚರ‍್ಲಹಳ್ಳಿ ಪಿಎಸ್‌ಐ ಶಿವಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿಎಸ್‌ಐ ನಾಗೇಂದ್ರಪ್ರಸಾದ್, ಸೇರಿದಂತೆ 112 ಪೊಲೀಸ್ ವಾಹನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು, ವಿಷಯ ತಿಳಿದು ಅಗ್ನಿಶಾಮಕದಳದ ಅಧಿಕಾರಿ ಲೋಕೇಶ್ ನೇತೃತ್ವದ ತಂಡ ಸಹ ಸ್ಥಳಕ್ಕೆ ಅಗಮಿಸಿ ಬೈಕ್‌ಗೆ ತಗಲಿದ್ದ ಬೆಂಕಿಯನ್ನು ನಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಷಯತ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಡಿಷನಲ್ ಎಸ್ ಪಿ ರಾಜಾ ಇಮಾಂ ಖಾಸಿಂ ರವರು ಸಹ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ವರದಿಗಾರ: ಶ್ರೀನಾಥ್