ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರವು ಗ್ರಾ.ಪಂ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಜಾರಿಗೊಳಿಸುವುದನ್ನು ಸಹಿಸದ ಕೆಲ ಗ್ರಾ.ಪಂಗಳ ನೌಕರರು, ಸದಸ್ಯರಿಂದ ಮೇಲ್ವಿಚಾರರು ನಿತ್ಯ ಕಿರುಕುಳ ಎದುರಿಸುವಂತಾಗಿದೆ ಎಂದು ಗ್ರಾ.ಪಂ ಗ್ರಂಥಾಲಯ ಅರಿವು ಕೇಂದ್ರ ಹಾಗೂ ಮಾಹಿತಿ ಕೇಂದ್ರ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಪಂಪನಗೌಡ ಪಾಟೀಲ್ ಆರೋಪಿಸಿದರು. ನಗರದ ವಿನಯ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾಮಟ್ಟದ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿ, ಕೆಲ ಗ್ರಾ.ಪಂ ಗಳ ಪಿಡಿಒ, ಸದಸ್ಯರು ಮೇಲ್ವಿಚಾರಕರಿಗೆ ನೀಡುತ್ತಿರುವ ಕಿರುಕುಳದ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮೇಲ್ವಿಚಾರಕರು ಯಾವುದೇ ಕಾರಣಕ್ಕೂ ಅಂಜದೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು. ದಶಕಗಳ ಹೋರಾಟದ ಪ್ರತಿಫಲದಿಂದಾಗಿ ಪ್ರಸ್ತುತದ ರಾಜ್ಯಸರ್ಕಾರ ಸರ್ಕಾರವು ಕನಿಷ್ಟ ವೇತನವನ್ನು ಜಾರಿಗೊಳಿಸಿದೆ ಯಾದರೂ ಸರ್ಕಾರದಿಂದ 12 ಸಾವಿರ, ಗ್ರಾ.ಪಂ ಹಾಗೂ ಜಿ.ಪಂನಿಂದ ಉಳಿದ 6800 ರೂ ಪಡೆಯಬೇಕಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರದಿಂದಲೇ ಮೇಲ್ವಿಚಾರಕರ ಖಾತೆಗಳಿಗೆ ವೇತನವನ್ನು ಜಮಾ ಮಾಡಬೇಕೆಂಬ ತಮ್ಮ ಬೇಡಿಕೆ ಸರ್ಕಾರ ಪುರಸ್ಕರಿಸಿದ್ದು, ನವೆಂಬರ್‌ನಲ್ಲಿ ವೇತನದ ನೇರಪಾವತಿ ಹಾಗೂ ಇಡಿಗಂಟು ನೀಡುವ ಕುರಿತ ಆದೇಶವನ್ನು ಸರ್ಕಾರವು ಹೊರಡಿಸುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು. ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜು ಮಾತನಾಡಿ, 80ರ ದಶಕದಿಂದಲೂ ಗ್ರಂಥಪಾಲಕರು ಕೇವಲ 300ರೂಗಳ ಗೌರವಧನಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ವೇತನದ ನಡುವೆ ಸರ್ಕಾರದ ಎಲ್ಲ ಆದೇಶಗಳಿಗೆ ತಲೆಬಾಗಿ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ರಾಜ್ಯ ಸರ್ಕಾರವು ಕನಿಷ್ಟ ವೇತನ ನಿಗಧಿಗೊಳಿಸಿರುವುದು ವರದಾನವಾಗಿ ಪರಿಣಮಿಸಿದೆ. ಆದರೆ ಪ್ರಸ್ತುತ ಗ್ರಾ.ಪಂ ನೌಕರರು, ಸದಸ್ಯರು ಸಮಸ್ಯೆ ನೀಡುತ್ತಿರುವುದು ಸರಿಯಲ್ಲ ಎಂದು ನುಡಿದರು. ಸಂಘದ ಜಿಲ್ಲಾಧ್ಯಕ್ಷ ಮುದ್ದೇನಹಳ್ಳಿಯ ಅಶ್ವತ್ಥ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 136 ಗ್ರಾ.ಪಂ ಗ್ರಂಥಾಲಯಗಳಿದ್ದು, ಈ ಪೈಕಿ 21 ಗ್ರಂಥಾಲಯಗಳಲ್ಲಿ ಮೇಲ್ವಿಚಾರಕ ನೇಮಕವಾಗಬೇಕಿದೆ. ಮೇಲ್ವಿಚಾರಕರು ಮೃತರಾದಲ್ಲಿ, ಇಲ್ಲವೇ ನಿವೃತ್ತರಾದಲ್ಲಿ ಧನಸಹಾಯ ನೀಡದೆ ಬರಿಗೈಯಲ್ಲಿ ಮನೆಗೆ ಕಲುಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ನಿವೃತ್ತ ನೌಕರರಿಗೆ ಇಡಿಗಂಟು ಹಾಗೂ ಮೃತ ಮೇಲ್ವಿಚಾರಕರ ಕುಟುಂಬಗಳಿಗೆ ಧನಸಹಾಯ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯ ಖಜಾಂಚಿ ಶಿವಮೂರ್ತಿ, ಪ್ರಧಾನಕಾರ್ಯದರ್ಶಿ ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ಸುರೇಶ್, ರಾಜ್ಯ ದೇವನಹಳ್ಳಿ ಶ್ರೀನಿವಾಸ್, ಜಿಲ್ಲಾ ಕಾನೂನು ಸಲಹೆಗಾರ ಗಿರಿನಾಯಕ್, ಕೋದಂಡರಾಮಪ್ಪ, ಅಶ್ವತ್ಥನಾರಾಯಣ್, ಸದಾಶಿವ, ಡಿ ಪಾಳ್ಯ ನಾಗರಾಜ್, ದೇವಣ್ಣ, ವೆಂಕಟರತ್ನಮ್ಮ, ಚೆನ್ನಕೇಶವ, ನಿರ್ಮಲಮ್ಮ, ಕತ್ರಿಗುಪ್ಪೆ ವೆಂಕಟೇಶ್, ಕೈವಾರ ಶ್ರೀನಿವಾಸ್ ಇದ್ದರು.
ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆ .
ಸಂಘದ ಜಿಲ್ಲಾಧ್ಯಕ್ಷರನ್ನಾಗಿ ಮುದ್ದೇನಹಳ್ಳಿಯ ಅಶ್ವತ್ ಅವರನ್ನು ಮುಂದಿನ ಅವಧಿಗೂ ಮುಂದು ವರೆಸಲಾಗುತ್ತಿದೆ ಎಂದು ಸಭೆಯಲ್ಲಿ ಘೋಷಿಸಿದ ಸಂಘದ ರಾಜ್ಯಾಧ್ಯಕ್ಷ ಪಂಪನಗೌಡ, ಈ ಹಿಂದೆ ಆಯ್ಕೆಯಾಗಿದ್ದ ಸಂಘದ ಪದಾಧಿಕಾರಿಗಳು ಆಯಾ ಹುದ್ದೆಗಳಲ್ಲಿ ಮುಂದುವರೆಯಲಿದೆ. ಇವರ ಜೊತೆಗೆ ಹೆಚ್ಚುವರಿಯಾಗಿ ಜಿಲ್ಲಾ ಗೌರವಾಧ್ಯಕ್ಷರಾಗಿ ದಿಟ್ಟೂರಹಳ್ಳಿ ಶಿವಣ್ಣ, ಉಪಾಧ್ಯಕ್ಷರಾಗಿ ಹಾಲಗಾನಹಳ್ಳಿ ನಾಗಮಣಿ, ಚಿಂತಾಮಣಿ ತಾಲೂಕು ಅಧ್ಯಕ್ಷರಾಗಿ ರೇವಣ್ ಕುಮಾರ್ ಹಾಗೂ ಪದಾಧಿಕಾರಿಗಳನ್ನಾಗಿ ಜರಬಂಡಹಳ್ಳಿ ಸತೀಶ್, ಮಂಚೇನಹಳ್ಳಿ ವೆಂಕಟೇಶ್, ಚಿನ್ನಸಂದ್ರ ಸುಬ್ರಮಣಿ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದರು.
ವರದಿ : ಶ್ರೀನಾಥ