ಬೆಂಗಳೂರು ನಗರ ಜಿಲ್ಲೆ, ಜಲೈ 06:
ಇತ್ತೀಚಿಗೆ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿಯಲ್ಲಿ ಐತಿಹಾಸಿಕ ಕಟ್ಟಡವಾದ “ದಿ ಗ್ರೇಟ್ ಟ್ರಿಜ್ಞಾಮೆಟ್ರಿಕಲ್ ಸರ್ವೆ ಪಾಯಿಂಟ್ ನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಸವೇಶ್ವರ ನಗರದ ನಿವಾಸಿಯಾದ ಆರೋಪಿ ಗಣೇಶ್ ಎಂ.ಎನ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ದಿ ಗ್ರೇಟ್ ಟ್ರಿಜ್ಞಾಮೆಟ್ರಿಕಲ್ ಸರ್ವೆ ಪಾಯಿಂಟ್ ನಿಂದ 1800 ರಲ್ಲಿ ಲೆಫ್ಟಿನೆಂಟ್ ಕರ್ನಲ್ ವಿಲಿಯಂ ಲ್ಯಾಮ್ಡನ್ ಅವರು ಭಾರತವನ್ನು ಅಳೆಯಲು ಪ್ರಾರಂಭಿಸಿದ ಕಾರಣ ಇದನ್ನು ಐತಿಹಾಸಿಕ ಕಟ್ಟಡವನ್ನಾಗಿ ಸಂರಕ್ಷಿಸಲಾಗಿತ್ತು.
ಜೂನ್ 2 ರ ಭಾನುವಾರದಂದು ಬಿದರಹಳ್ಳಿಯ ಕಣ್ಣೂರು ಗ್ರಾಮದಲ್ಲಿರುವ ಈ ಐತಿಹಾಸಿಕ ಕಟ್ಟಡವನ್ನು ಧ್ವಂಸಗೊಳಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಅಪರ ಪ್ರಾದೇಶಿಕರಾದ ಇಸ್ಲಾವುದ್ದೀನ್ ಜೆ ಗದ್ಯಾಳ್ ಅವರಿಗೆ ತನಿಖೆ ನಡಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಸ್ಥಳ ಪರಿಶೀಲನೆ ಮಾಡಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಜುಲೈ 4 ರಂದು ಬಸವೇಶ್ವರ ನಗರದ ನಿವಾಸಿ ಗಣೇಶ್ ಎಂ.ಎನ್ ಅವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೂರ್ವ ತಹಶೀಲ್ದಾರ್ ರವಿ.ವೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.