ಬೆಂಗಳೂರು, ಆಗಸ್ಟ್ 30
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ (ವಾರ) ಹಾಗೂ ಮಾಸಿಕ ಪಾಸುಗಳನ್ನು ಪೂರ್ವ ಮುದ್ರಿತ ಮಾದರಿಯಲ್ಲಿ ಮತ್ತು ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯು ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳು ಸಾರ್ವಜನಿಕ ಪ್ರಯಾಣಿಕರಿಗೆ ಸುಲಭವಾಗಿ ದೊರೆಯಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ, ಪಾಸುಗಳನ್ನು ಪೂರ್ಣ ಪ್ರಮಾಣದಲ್ಲಿ ಸೆಪ್ಟೆಂಬರ್ 15 ರಿಂದ ಅನ್ವಯವಾಗುವಂತೆ ಡಿಜಿಟಲ್ ವ್ಯವಸ್ಥೆಯ ಮೊಬೈಲ್ ಆ್ಯಪ್ (Mobile app) ಮುಖಾಂತರ ವಿತರಿಸಲು ಕ್ರಮ ಕೈಗೊಂಡಿರುತ್ತದೆ.
ಸಾರ್ವಜನಿಕ ಪ್ರಯಾಣಿಕರು ತಮ್ಮ ಮೊಬೈಲ್‍ನಲ್ಲಿ ಡಿಜಿಟಲ್ ಪಾಸುಗಳನ್ನು ಪ್ಲೇಸ್ಟೋರ್‍ನಲ್ಲಿ ಟುಮ್ಯಾಕ್ ಆ್ಯಪ್‍ನ್ನು (Tummoc app) ಡೌನ್‍ಲೋಡ್ ಮಾಡಿಕೊಂಡು ನೋಂದಣಿಯಾಗುವುದು. ದೈನಿಕ / ಸಾಪ್ತಾಹಿಕ / ಮಾಸಿಕ ಪಾಸನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರವನ್ನು
ಕ್ಲಿಕ್ಕಿಸುವುದು. ಪಾಸು ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಪಾಸು ಲಭ್ಯವಾಗುವುದು. ಡಿಜಿಟಲ್ ಪಾಸಿನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸುವುದು ಹಾಗೂ ವಾಹನಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್‍ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸಿನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗಳಿಗೆ ತೋರಿಸುವುದು.
ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.in ವೆಬ್ ಸೈಟನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.