ಬೆಂಗಳೂರು | ಸಸ್ಯಕಾಶಿ ಲಾಲ್‌ಬಾಗ್‌ನ 6 ಎಕರೆ ಜಾಗದಲ್ಲಿ ಪಶ್ಚಿಮ ಘಟ್ಟದ ಕಾಡು ನಿರ್ಮಾಣ
ರಾಜ್ಯ ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನ 6 ಎಕರೆಯ ಕಲ್ಲು ಬಂಡೆಯಂತಹ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನು ಹಾಕಿದ್ದು, ಪಶ್ಚಿಮ ಘಟ್ಟದ ರೀತಿ ಅಭಿವೃದ್ದಿ ಪಡಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಈಗಾಗಲೇ ಈ ಗಿಡಗಳನ್ನ ಹಾಕಿ 5 ರಿಂದ 6 ತಿಂಗಳು ಕಳೆದಿದ್ದು, ಇನ್ನು ಐದು ವರ್ಷದಲ್ಲಿ ಈ ಗಿಡಗಳು ದೊಡ್ಡದಾಗಿ ಬೆಳೆದು ದಟ್ಟ ಕಾಡಿನಂತೆಯೇ ನಿರ್ಮಾಣವಾಗಲಿವೆ.
ಅಳಿವಿನಂಚಿನಲ್ಲಿರುವ ಗಿಡಗಳನ್ನು ನೆಟ್ಟು, ಹೊಸ ವೈವಿಧ್ಯತೆಯನ್ನ ಸೃಷ್ಟಿಮಾಡಲು ತೋಟಾಗಾರಿಕಾ ಇಲಾಖೆ ಮುಂದಾಗಿದ್ದು, ಉಳುಗೇರಿ, ಪ್ರುತ್ರಂಜೀವ, ಎಣ್ಣೆ ಮರ, ಗಾರ್ಸಿನಿಯಾ, ಮ್ಯಾಂಗೋ ಸ್ಟೀನ್, ನವಿಲಾಡಿ, ದೂಪದ ಮರ, ಡಯಾಸ್ ಸ್ಪರಸ್, ಪಾಲ್ಸ ಹಣ್ಣು, ಸ್ರೋಪ್ ಪೈನ್, ಅಂಟುವಾಳ, ಮಡ್ಡಿ ದೀಪದ ಮರ, ಸ್ಫೈಸ್ ಮರಗಳು, ರುದ್ರಾಕ್ಷಿ ಮರ, ತಾರೇ ಮರ, ಆರ್ಡಿಸಿಯಾ ಎಮಿಲಿಸಿಸ್ ಸೇರಿದಂತೆ ಹಲವು ರೀತಿಯ ಅಪರೂಪದ ಗಿಡಗಳನ್ನು ಹಾಕಲಾಗಿದೆ. ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಈ ಯೋಜನೆಗೆ ಸುಮಾರು ₹45 ಲಕ್ಷ ಖರ್ಚು ಮಾಡಲಾಗಿದೆ. ಸದ್ಯ ಬಾಟಾನಿಕಲ್ ಗಾರ್ಡಾನ್ ಬಗ್ಗೆ ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಪಕ್ಷಿಗಳು ಜೀವಿಸಲು ಅನುಕೂಲವಾಗುವ ರೀತಿಯಲ್ಲಿ ಪಶ್ಚಿಮ ಘಟ್ಟದ ಕಾಡನ್ನ ನಿರ್ಮಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ನಾಲ್ವರು ಶಂಕಿತರು ಪೊಲೀಸ್ ವಶಕ್ಕೆ
ಕಳೆದ ಹಲವು ವರ್ಷಗಳಿಂದ ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಣ್ಣಿನ ಫಲವತ್ತತೆ ಕುರಿತು ಕೆಲಸ ಮಾಡುತ್ತಿದ್ದು, ಸಹ್ಯಾದ್ರಿ ಬೆಟ್ಟದಿಂದ ತರಿಸಿದ್ದ 300 ಸಸಿಗಳನ್ನು ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ನೆಡಲಾಗಿದೆ.
ಮುಂದಿನ ದಿನಗಳಲ್ಲಿ, ಜಲಚರಗಳು ಮತ್ತು ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಣ್ಣ ಕೊಳಗಳನ್ನು ಸಹ ರಚಿಸಲು ಚಿಂತನೆ ಇದೆ. ಇದು ಮರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಪೊದೆಗಳು, ಗಿಡಮೂಲಿಕೆಗಳ ಸಸ್ಯಗಳನ್ನು ನೇಡಲು ಯೋಜಿಸಲಾಗಿದೆ. ಇಲ್ಲಿ ನೆಟ್ಟ ಮರಗಳು ದೊಡ್ಡದಾದ ಬಳಿಕ ಪ್ರವಾಸಿಗರಿಗೆ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ.