ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 02
ಭ್ರೂಣ ಹತ್ಯೆಯು ಕಾನೂನು ಬಾಹಿರ ಶಿಕ್ಷಾರ್ಹ ಅಪರಾಧ ವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಭ್ರೂಣ ಹತ್ಯೆಯನ್ನು ತಡೆಯಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಡೆದ ‘ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಣೆ ತಡೆ, ಭ್ರೂಣ ಹತ್ಯೆ ತಡೆ, ಬಾಲ್ಯ ವಿವಾಹ ತಡೆ, ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರಬೇಕು. ಸಾರ್ವಜನಿಕರು ಕೂಡ ಯಾವುದೇ ಮೂಡನಂಬಿಕೆ ಅಥವಾ ಆಸೆ ಆಮಿಷಗಳಿಗೆ ಒಳಗಾಗದೆ ಮಕ್ಕಳ ರಕ್ಷಣೆ, ಭ್ರೂಣ ಹತ್ಯೆಗಳನ್ನು ತಡೆಯಬೇಕು. ಭ್ರೂಣ ಹತ್ಯೆ, ಬಾಲ್ಯ ವಿವಾಹ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ನಡೆಸಿದಲ್ಲಿ ಅಂತವರ ವಿರುದ್ಧ ಹಾಗೂ ಅದಕ್ಕೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ಮಾನವ ಕಳ್ಳಸಾಗಣೆ, ಭ್ರೂಣ ಹತ್ಯೆ ಇವುಗಳಿಂದ ಜಿಲ್ಲೆಯನ್ನು ಮುಕ್ತ ಗೊಳಿಸಬೇಕು. ಇದಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರ್ಯಕ್ರಮದಲ್ಲಿ ನೆಲಮಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಸೋನಿಯಾ ಅವರು ಮಾತನಾಡಿ, ಪ್ರಸಕ್ತ ವರ್ಷದ ಕರ್ನಾಟಕದಲ್ಲಿ 1000 ಪುರುಷರಿಗೆ 973 ಸ್ತ್ರೀಯರು ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1000 ಪುರುಷರಿಗೆ 946 ಸ್ತ್ರೀಯರ ಸಂಖ್ಯೆವಿದೆ. ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭಾವಸ್ಥೆಯ ಮಹಿಳೆಯರು ತಮ್ಮ ಮಗುವಿನ ಬೆಳವಣಿಗೆ ಬಗ್ಗೆ ಮಾತ್ರ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ವಕೀಲರಾದ ಮಹೇಶ್ ದಾಸ್ ಮಾತನಾಡಿ, ಭ್ರೂಣಲಿಂಗ ಹತ್ಯೆ ತಡೆಗಟ್ಟಲು 1988 ರಲ್ಲಿ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಈ ಭ್ರೂಣಲಿಂಗ ಹತ್ಯೆ ಮಾಡುವದು ಶಿಕ್ಷಾರ್ಹ ಅಪರಾಧವಾಗಿದ್ದು, ಮೊದಲ ಪ್ರಕರಣದ ವೈದ್ಯರಿಗೆ 10 ಸಾವಿರ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆವಿದೆ. ಹೆಣ್ಣು-ಗಂಡು ಮಗು ಎನ್ನುವ ತಾರತಮ್ಯ ಬಿಟ್ಟು, ಪ್ರತಿಯೊಬ್ಬರೂ ಹೆಣ್ಣು ಭ್ರೂಣ ಹತ್ಯೆ ತಡೆಯುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿನಿಯರ್ ಸ್ಪೆಷಲೀಸ್ಟ್ ಇನ್ ಪಾಟ್ನರ್ಸ್ ವಿಹಾನ್ ಸಂಸ್ಥೆಯ ರೋವಿನ ಬಾಸ್ಟೀನ್ ಅವರು ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಚಟುವಟಿಕೆಗಳು ವಿಪರೀತವಾಗಿ ನಡೆಯುತ್ತಿವೆ. ಜನರ ಬಡತನ, ಆರ್ಥಿಕ ಪರಿಸ್ಥಿತಿಯನ್ನು ಗುರಿಯಾಗಿಸಿಕೊಂಡು ಹುಡುಗಿಯರು ಹಾಗೂ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವುದು ಕಂಡು ಬರುತ್ತಿದೆ. ಸಮಾಜದಲ್ಲಿನ ಬಡತನ ನಿರ್ಮೂಲನೆ, ಹೆಣ್ಣು ಶೋಷಣೆ, ಲಿಂಗ ಅಸಮಾನತೆಯನ್ನು ನಿರ್ಮೂಲನೆ ಮತ್ತು ಸಾರ್ವಜನಿಕರು ಜಾಗೃತಿ ವಹಿಸುವುದಿಂದ ಮಾನವ ಕಳ್ಳ ಸಾಗಾಣಿಕೆ ತಡೆಯಬಹುದೆಂದು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ. ಮುದ್ದಣ್ಣ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನಿತಾಲಕ್ಷ್ಮೀ ಎಸ್, ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ್ ಕಾವಳೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುನೀಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.