ಬೆಂಗಳೂರು, ಮೇ 27:
ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಹನ್ನೊಂದು ಸದಸ್ಯರು ಜೂನ್ 17 ರಂದು ನಿವೃತ್ತರಾಗಲಿರುವುದರಿಂದ ಅವರ ಸ್ಥಾನಗಳನ್ನು ತುಂಬಲು ವಿಧಾನಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಭಾರತದ ಚುನಾವಣಾ ಆಯೋಗವು ನಿರ್ಧರಿಸಿದೆ.
ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ದಿನಾಂಕ 27 ಮೇ, 2024 ಸೋಮವಾರ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 03 ಜೂನ್, 2024 ಸೋಮವಾರ, ನಾಮಪತ್ರ ಪರಿಶೀಲನೆ ಜೂನ್ 04 ಮಂಗಳವಾರ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 06 ಜೂನ್, 2024 ಗುರುವಾರ, ಮತದಾನದ ದಿನಾಂಕ 13 ಜೂನ್ 2024 ಗುರುವಾರ, ಮತದಾನದ ಸಮಯ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ, ಮತಗಳ ಎಣಿಕೆ 13 ಜೂನ್ 2024 ಗುರುವಾರ ಸಂಜೆ 5 ಗಂಟೆಯಿಂದ, ಚುನಾವಣೆ ಮುಕ್ತಾಯವಾಗುವ ದಿನಾಂಕ 15 ಜೂನ್ 2024 ಶನಿವಾರ.
ಈ ದ್ವೈವಾರ್ಷಿಕ ಚುನಾವಣೆಗೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಕೆ.ವಿಶಾಲಾಕ್ಷಿ ಅವರು ಚುನಾವಣಾಧಿಕಾರಿಯಾಗಿ ಹಾಗೂ ಕರ್ನಾಟಕ ವಿಧಾನಸಭೆಯ ನಿರ್ದೇಶಕರಾದ ಬಿ.ಎಸ್. ಮಹಾಲಿಂಗೇಶ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.
ಚುನಾವಣೆಗೆ ಸ್ಪರ್ಧಿಸಲಿಚ್ಚಿಸುವ ಅಭ್ಯರ್ಥಿಗಳು 27 ಮೇ, 2024 ರಿಂದ 3 ಜೂನ್ 2024 ರವರೆಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರ ಕಛೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, 2 ಜೂನ್ 2024 ರ ಭಾನುವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಆ ದಿನದಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2ಡಿ ಯಲ್ಲಿ ಸಲ್ಲಿಸಬೇಕು. ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ ಕನಿಷ್ಠ ಹತ್ತು ಜನ ಹಾಲಿ ವಿಧಾನಸಭಾ ಸದಸ್ಯರು ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದೊಂದಿಗೆ ರೂ. 5,000/- ಗಳನ್ನು ಹಾಗೂ ಇತರ ಅಭ್ಯರ್ಥಿಗಳು ರೂ. 10,000/- ಗಳನ್ನು ಠೇವಣಿ ಇಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿ / ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.