ಬೆಂಗಳೂರು ಗ್ರಾಮಾಂತರ ಜಿಲ್ಲೆ. ಸೆಪ್ಟೆಂಬರ್ 09
ಕರ್ನಾಟಕ ರಾಜ್ಯ ಸರ್ಕಾರವು 2024-25 ಸಾಲಿನ ಆಯವ್ಯಯದಲ್ಲಿ ಸಂಚಾರಿ ಕುರಿಗಾಹಿಗಳು ಇರುವ ಜಾಗದಲ್ಲೇ ಅವರ ಕುರಿ/ಮೇಕೆಗಳಿಗೆ ಸರ್ಕಾರಿ ಪಶುವೈದ್ಯರಿಂದ ಲಸಿಕೆ ಹಾಕುವ ಸಲುವಾಗಿ ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪೂರಕ ಅಂಗ ಸಂಸ್ಥೆಯಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಆದ್ದರಿಂದ ಸಂಚಾರಿ ಕುರಿಗಾಹಿಗಳು ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಸಂಚಾರಿ ಕುರಿಗಾಹಿಗಳು ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಗಣತಿ/ಇಲಾಖೆಯ ದಾಖಲಾತಿ ಆಧಾರದ ಮೇಲೆ ವಲಸೆ ಕುರಿಗಾರನು ಕನಿಷ್ಠ 20 ಕುರಿಗಳನ್ನು ಹೊಂದಿರುವ ಬಗ್ಗೆ ದೃಢೀಕರಣ ಪತ್ರ, ವಲಸೆ ಕುರಿಗಾರನಾಗಿ ಕುರಿಗಳೊಂದಿಗೆ ವಲಸೆ ಹೋಗುವುದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಮಹಜರ್ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಫ್ರೂಟ್ಸ್ ಐಡಿ, ಪಡಿತರ ಚೀಟಿಯ ಪ್ರತಿ ಮತ್ತು ಅರ್ಜಿಯಲ್ಲಿ ತಿಳಿಸಿದ ಇನ್ನಿತರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.