ಬೆಂಗಳೂರು, ಮೇ 29:
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.ಆವರಣದಲ್ಲಿ “ಅಂತರಾಷ್ಟ್ರೀಯ ಕಾಂಪೋಸ್ಟಿಂಗ್ ಮತ್ತು ಸಸ್ಯಆರೋಗ್ಯ ದಿನ – 2024” ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಕಾರ್ಯಕ್ರಮನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾವು ಸ್ವ್ವಾತಂತ್ರ್ಯ ಪೂರ್ವದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸದೇ ಹೊರ ದೇಶಗಳ ಮೇಲೆ ಅವಲಂಬಿತರಾಗಿದ್ದೆವು. ಭಾರತರತ್ನ, ಕೃಷಿ ತಜ್ಞ ದಿವಂಗತ ಡಾ: ಎಂ.ಎಸ್. ಸ್ವಾಮಿನಾಥನ್‍ರವರ ಮುಂದಾಳತ್ವ ಮತ್ತು ಮುಂದಾಲೋಚನೆಯಿಂದ ಹಸಿರು ಕ್ರಾಂತಿಯಿಂದಾಗಿ ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವಂತಾಯಿತು. ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ರಸಗೊಬ್ಬರಗಳ ಹಾಗೂ ಕೀಟನಾಶಕಗಳ ಬಳಕೆಗೆ ಕಾರಣವಾಯಿತು, ಪರಿಣಾಮವಾಗಿ ಮಣ್ಣಿನ ಫಲವತ್ತತೆ ಕುಂಠಿತವಾಗುವುದರ ಜೊತೆಗೆ ಆಹಾರ ಉತ್ಪಾದನೆಯ ವೆಚ್ಚವೂ ಸಹ ಹೆಚ್ಚಾಯಿತು. ಪ್ರಸ್ಥುತ ಮಣ್ಣು ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಹಾಗೂ ಸೂಕ್ಷ್ಮ ಜೀವಿಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತ್ತಿದೆ ಎಂದರು.
ನಮ್ಮ ದೇಶದಲ್ಲಿ ಮಣ್ಣಿನಲ್ಲಿ ಸಾವಯವ ಇಂಗಾಲ ಪ್ರಮಾಣಶೇಕಡಾ0.70ರಷ್ಟು ಇರಬೇಕಾಗಿದ್ದು ಕೇವಲ 0.30 ರಷ್ಟಿರುವುದು ಕಳವಳಕಾರಿ ಅಂಶವಾಗಿದೆ. ಆದ್ದರಿಂದ ರೈತರು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಎರೆಗೊಬ್ಬರ ಮುಂತಾದ ಜೈವಿಕ ಹಾಗೂ ಸಾವಯವ ಗೊಬ್ಬರಗಳನ್ನು ಸಕಾಲದಲ್ಲಿ ಮಣ್ಣಿಗೆ ಸೇರಿಸಲು ಒತ್ತು ನೀಡಬೇಕು. ಕೃಷಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಶೇಕಡಾ 50 ರಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಶೇಕಡಾ 80 ರಷ್ಟು ಮಣ್ಣಿನ ಅವನತಿಯನ್ನು ಸಾವಯವ ವಸ್ತುಗಳ ಸಮರ್ಪಕ ಬಳಕೆಯಿಂದ ತಡೆಗಟ್ಟಬಹುದು ಎಂದು ತಿಳಿಸಿದರು.
ನಮ್ಮ ದೇಶದಲ್ಲಿ 62ಮಿಲಿಯನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಸುಮಾರು 27 ಮಿಲಿಯನ್‍ರಷ್ಟು ತ್ಯಾಜ್ಯವು ಕಾಂಪೋಸ್ಟ್ ತಯಾರಿಸಲು ಯೋಗ್ಯವಾಗಿದೆ ಇದರಿಂದ ಒಂದು ಮಿಲಿಯನ್ ಸಾರಜನಕ, ರಂಜಕ ಮತ್ತು ಪೊಟ್ಯಾಶ್‍ಅನ್ನು ಉತ್ಪಾದಿಸಬಹುದು ಮತ್ತು ರಸಗೊಬ್ಬರಗಳ ಆಮದನ್ನು ಕಡಿಮೆಗೊಳಿಸಿ ದೇಶದ ಆರ್ಥಿಕ ಶಕ್ತಿಯನ್ನು ಸದೃಡಗೊಳಿಸಬಹುದು. ಈ ವರ್ಷದ ಘೋಷವಾಕ್ಯ “ಕಾಂಪೋಸ್ಟ್……ಪ್ರಕೃತಿಯ ಹವಾಮಾನ ರಕ್ಷಕ”, ಹವಾಮಾನ ಬದಲಾವಣೆಯನ್ನು ಯಥಾಸ್ಥಿತಿ ಸ್ವೀಕರಿಸುವ ಬದಲು ನಾವು ಇನ್ನೂ ಹೋರಾಡಬಹುದು ಎಂಬ ನೈಜ ಸಂಗತಿಯನ್ನು ಎತ್ತಿತೋರಿಸುತ್ತದೆ. ಸಾವಯವ ತ್ಯಾಜ್ಯಗಳನ್ನು ಕಾಂಪೋಸ್ಟ್ ಮಾಡಿ ಮಣ್ಣಿಗೆ ಹಿಂತಿರುಗಿಸುವದರಿಂದ, ಮಣ್ಣಿನ ಆರೋಗ್ಯ ಮತ್ತು ಜೀವವೈವಿಧ್ಯತೆಯಲ್ಲಿ ಸುಧಾರಣೆ, ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳ, ಆಹಾರ ಭದ್ರತೆ, ಇಂಗಾಲ ಸ್ಥಿರೀಕರಣ ಮತ್ತು ನೀರಿನ ಗುಣಮಟ್ಟ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುವುದರೊಂದಿಗೆ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನೂ ಸಹ ಕಡಿಮೆ ಮಾಡಬಹುದು. ಮಣ್ಣಿನ ಆರೋಗ್ಯದ ಸ್ಥಿತಿಯು ಆತಂಕಕಾರಿಯಾಗಿ ಕುಸಿಯುತ್ತಿರುವುದು ಕೃಷಿ ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಸಮತೋಲನ ರಸಗೊಬ್ಬರ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸಾವಯವ ಗೊಬ್ಬರಗಳಾದ ಕಾಂಪೋಸ್ಟನ ಬಳಕೆ, ಬೆಳೆ ಪರಿವರ್ತನೆ ಮತ್ತು ಸಂರಕ್ಷಣಾ ಕೃಷಿ ಪದ್ಧತಿಗಳ ಅಗತ್ಯವಿದೆ. ಹವಾಮಾನ ಬದಲಾವಣೆಯಿಂದ ಭೂಮಿಯನ್ನು ರಕ್ಷಿಸಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಕೃಷಿ ವಿಸ್ತರಣಾ ವಿಭಾಗವು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ) ವಿದ್ಯಾರ್ಥಿ ಬಸವಲಿಂಗಪ್ಪ ನಾಯಕ್‍ರವರ ಛಾಯಾಚಿತ್ರ ಪ್ರಥಮ ಬಹುಮಾನ ಗಳಿಸಿರುತ್ತದೆ. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮನೋಜ್ ಮೆನನ್, ಕಾರ್ಯನಿರ್ವಾಹಕ ನಿರ್ದೇಶಕರು, ಅಂತರರಾಷ್ಟ್ರೀಯ ಸಾವಯವ ಕೃಷಿ ಸಾಮಥ್ರ್ಯಕೇಂದ್ರ, ಶಿವಣ್ಣ, ಸಾವಯವ ಗೊಬ್ಬರ ಉತ್ಪಾದಕರು, ಪ್ರಗತಿಪರ ರೈತರು, ಮಂಡ್ಯ, ಹಾಗೂ ವಿಶ್ವೇಶ್ವರ ಸಜ್ಜನ್, ಪ್ರಗತಿಪರ ರೈತರು, ಬಳ್ಳಾರಿ, ಡಾ: ಬಸವೇಗೌಡ, ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ: ಎನ್.ಬಿ. ಪ್ರಕಾಶ್,ಡೀನ್ (ಕೃಷಿ) ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ರವರು ವಹಿಸಿದ್ದರು