ಧಾರವಾಡ ಜೂನ್.05:
ಇಂದಿನ ಋತುಗಳ ವ್ಯತ್ಯಾಸದಲ್ಲಿ, ತಾಪಮಾನದ ಹೆಚ್ಚಳದಲ್ಲಿ ಪರಿಸರದ ಪಾತ್ರ ಮುಖ್ಯವಾಗಿದೆ. ಸ್ವಚ್ಛ, ಸುಂದರ, ಹಸಿರು ಪರಿಸರ ಕಾಪಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಮಕ್ಕಳಲ್ಲಿ ಹಸಿರು ಪರಿಸರ ಪ್ರೀತಿ ಹೆಚ್ಚಿಸಲು, ಬಾಂಧವ್ಯ ಬೆಳೆಸಲು ಮಕ್ಕಳೊಂದಿಗೆ ಮನೆಯ ಆವರಣದಲ್ಲಿ ಮರ ಒಂದನ್ನು ಬೆಳೆಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳೊಂದಿಗೆ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಪರಂಪರೆ, ಸಂಪ್ರದಾಯಗಳಲ್ಲಿ ಗಿಡ, ಮರಗಳಿಗೆ, ಕಾಡಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ. ಪ್ರತಿ ದೇವಸ್ಥಾನದಲ್ಲಿ ಒಂದು ಸ್ಥಾನಿಕ ಮರವಾಗಿ ಇದ್ದು, ಪೂಜೆಗೊಳ್ಳುತ್ತದೆ. ಇದು ನಂಬಿಕೆ ಮಾತ್ರವಲ್ಲ. ಇದರಲ್ಲಿ ಆರೋಗ್ಯ, ವಿಜ್ಞಾನ ಅಡಗಿದೆ. ವಿದ್ಯಾರ್ಥಿ ಜೀವನದಿಂದಲೇ ಗಿಡ, ಮರಗಳ ಬಗ್ಗೆ ಪ್ರೀತಿ ವಿಶ್ವಾಸ ಬೆಳೆಸಿದರೆ ಭವಿಷ್ಯದಲ್ಲಿ ಹಸಿರು ಪರಿಸರ, ಕಾಡು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಧುನಿಕ ಜೀವನಶೈಲಿಯಿಂದ ಪರಿಸರದ ಮೇಲೆ ಅನೇಕ ರೀತಿಯ ಪರಿಣಾಮಗಳು ಆಗುತ್ತವೆ. ಹಿಮಾಲಯ ಕರಗಿ, ಭೂಪ್ರದೇಶ ಮುಳುಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆಲ್ಲ ಪರಿಹಾರವಾಗಿ ಪರಿಸರ ಕಾಳಜಿ ಎಲ್ಲರಲ್ಲೂ ಮೂಡಬೇಕು ಎಂದು ಅವರು ತಿಳಿಸಿದರು.
ಧಾರವಾಡ ಬಾಲಬಳಗ ಶಾಲಾ ಮಕ್ಕಳು ಇಂದು ಪರಿಸರ ಜಾಗೃತಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ಇತರ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿದ್ದು ಮತ್ತು ಜಾಥಾದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಮಾದರಿ ಆಗಿದ್ದಾರೆ. ಅವರಿಗೆ ಜಿಲ್ಲಾಡಳಿತದ ಅಭಿನಂದನೆಗಳು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಂತರ ಅವರು ಶಾಲಾ ಮಕ್ಕಳು ನೀಡಿದ ಎರಡು ಸಸಿಗಳನ್ನು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೆಟ್ಟು, ನೀರುಣಿಸಿದರು. ಬಾಲಬಳಗ ಸಂಸ್ಥೆ ಮುಖ್ಯಸ್ಥ ಡಾ.ಸಂಜೀವ ಕುಲಕರ್ಣಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಾಲಬಳಗ ಶಾಲಾ ಮಕ್ಕಳು ಪರಿಸರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪಿ.ಶುಭ ಅವರು ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು, ಬಾಲಬಳಗ ಶಾಲೆಯ ಶಿಕ್ಷಕೀಯರು, ಸಿಬ್ಬಂದಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.