ವಿಜಯಪುರ, ಜೂನ್ 11 :-
ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳು ಕಡ್ಡಾಯವಾಗಿ ಕೆಪಿಎಂಇ (.ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ) ಕಾಯ್ದೆ -2018 ರ ಅಡಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಸೋಮುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಪಿಎಂಇ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳು, ಪ್ರಯೋಗಾಲಯ, ನರ್ಸಿಂಗ್ ಹೋಮ್ ಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಬೇಕು. ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ನೋಂದಣಿ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.
ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣದ, ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನೋಂದಣಿಯಾಗದೆ ಇರುವ ಸಂಸ್ಥೆಗಳು ಒಂದು ವಾರದ ಒಳಗೆ ನೋಂದಣಿ ಹಾಗೂ ನವೀಕರಣ ಮಾಡಿಸತಕ್ಕದ್ದು, ತಪ್ಪಿದಲ್ಲಿ ಕೆಪಿಎಂಪಿ ಕಾಯ್ದೆ – 2018 ರ 19ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು .
ನಕಲಿ ವೈದ್ಯರು, ನಕಲಿ ಔಷಧಾಲಯ, ಕ್ಲಿನಿಕ್ ಗಳು ಕಂಡು ಬಂದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಆಯಾ ತಾಲೂಕ್ ವ್ಯಾಪ್ತಿಯ ತಹಶೀಲ್ದಾರ್ ಪೊಲೀಸ್ ಇಲಾಖೆಯ ಜೊತೆ ಸಮನ್ವಯ ಸಾಧಿಸಿ ಅಂತಹ ಸಂಸ್ಥೆ ಗಳ ಮೇಲೆ ದಂಡ ಹಾಗೂ ಕಾನೂನು ಕ್ರಮ ಜರಗಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಸ್ತಿಹೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಹಾಗೂ ಇತರರು ಇದ್ದರು.