ಮಲೆನಾಡಿನ ವಿಶಿಷ್ಟ ಹಲಸಿನ ತಳಿಗೆ ಪ್ರಾಧಿಕಾರದ ಮಾನ್ಯತೆ : ಡಾ|| ಬಿ.ಎಂ.ದುಶ್ಯಂತಕುಮಾರ್

0
43
Share this Article
0
(0)
Views: 0

ಶಿವಮೊಗ್ಗ : ಜೂನ್ 14:

ಅಳಿವಿನಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಸಂರಕ್ಷಿಸಿ, ಬೆಳೆಸುವ ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ|| ಎಂ.ಬಿ.ದುಶ್ಯಂತಕುಮಾರ್ ಅವರು ಹೇಳಿದರು.

ಅವರು ಇಂದು ಮಲೆನಾಡಿನ ವಿಶಿಷ್ಟ ಹಲಸಿನ ತಳಿಗಳಾದ ಹಳದಿ ರುದ್ರಾಕ್ಷಿ-ಜೆ.ಎ.ಆರ್., ಆರೆಂಜ್-ಆರ್.ಪಿ.ಎನ್., ಕೆಂಪು ರುದ್ರಾಕ್ಷಿ-ಡಿ.ಎಸ್.ವಿ ಮತ್ತು ರೆಡ್-ಆರ್.ಟಿ.ಬಿ. ತಳಿಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಣಿಗೊಂಡು ಮಾನ್ಯತೆ ಪಡೆದಿವೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು.

ಈ ನಾಲ್ಕು ತಳಿಗಳ ಕುರಿತು ಸುಮಾರು 3-4ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಿ, ಸಂಪೂರ್ಣ ಮಾಹಿತಿಯನ್ನು ನವದೆಹಲಿಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಾಧಿಕಾರದಿಂದ ನೇಮಕಗೊಂಡ ತಜ್ಞ ವಿಜ್ಞಾನಿಗಳು 2ಬಾರಿ ಸ್ಥಳ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ, ಅಂತಿಮವಾಗಿ ನೋಂದಣಿಗೆ ಅರ್ಹವೆಂದು ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡು ಪ್ರಮಾಣಪತ್ರ ದೊರಕಿರುವುದು ಹರ್ಷದ ಸಂಗತಿ ಎಂದವರು ಮಾಹಿತಿ ನೀಡಿದರು.
ಈ ಅಪರೂಪದ ಸಸ್ಯ ತಳಿಗಳನ್ನು ಪ್ರಸಕ್ತ ಸಾಲಿನಿಂದಲೇ ಅಭಿವೃದ್ಧಿಪಡಿಸಿ, ಆಸಕ್ತ ಕೃಷಿಕರಿಗೆ ತಲುಪಿಸಲು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ವಿಶೇಷ ಗಮನಹರಿಸಲಿದೆ. ಅಲ್ಲದೇ ಅಪ್ಪೇ ಮಿಡಿ ತರಹದ ಅತ್ಯಪರೂಪದ ಮಾವಿನ ವಿಶಿಷ್ಟ ತಳಿಗಳನ್ನೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಿದೆ ಎಂದರು.

ಈ ತಳಿಗಳು ಮಲೆನಾಡು ಮಾತ್ರವಲ್ಲದೇ ದೇಶದ ಎಲ್ಲೆಡೆ ಬೆಳೆಯಬಹುದಾಗಿದ್ದು, ಎಲ್ಲಾ ಕಾಲಮಾನಕ್ಕೂ ಹೊಂದಿಕೊಳ್ಳಲಿವೆ. ಇದರ ಸವಿ ಎಲ್ಲರೂ ಸವಿಯುವಂತಾಗಬೇಕು. ಅಲ್ಲದೇ ಅಪರೂಪದ ತಳಿ ಇವುಗಳಾಗಿದ್ದು, ಹಲಸು ಬೆಳೆಯುವ ಆಸಕ್ತ ಕೃಷಿಕರಿಂದ ಈ ಹಲಸಿನ ತಳಿ ಉಳಿದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಪ್ರಾಂತೀಯ ಕಚೇರಿಯ ಮುಖ್ಯಸ್ಥ ಡಾ|| ಎಂ.ಕೆ.ಸಿಂಗ್ ಅವರು ಮಾತನಾಡಿ, ಪ್ರತಿ ತಳಿಯ ಹಲಸಿನ ಬಗ್ಗೆ ವೈಜ್ಞಾನಿಕವಾಗಿ ವಿಶೇಷ ಅಧ್ಯಯನ ನಡೆಸಿ, ಅದರ ಸಂಪೂರ್ಣ ಮಾಹಿತಿಯನ್ನು ನೋಂದಣಿಯ ಸಂದರ್ಭದಲ್ಲಿ ಸಲ್ಲಿಸಲಾಗಿದೆ. ಈ ಅಪರೂಪದ ತಳಿ ಬೆಳೆಯುವುದರಿಂದ ನಶಿಸುತ್ತಿರುವ ತಳಿ ಸಂರಕ್ಷಿಸುವುದು ಮತ್ತು ಬೆಳೆಗಾರರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದರು.

ಈ ಹಣ್ಣುಗಳ ವಿಶೇಷ ಸ್ವಾದ ಹೊಂದಿವೆ. ಮಲೆನಾಡಿನ ಕೆಲ ಭಾಗದಲ್ಲಿ ಮಾತ್ರ ಈ ತಳಿಗಳು ಕಂಡುಬರುತ್ತಿದ್ದು, ದೇಶದಾದ್ಯಂತ ಕಾಣದಾಗಿದೆ. ಈ ಹಣ್ಣಿನ ತಳಿಗಳು ಹೊಂದಿರುವ ವಿಶಿಷ್ಟ ಗುಣ, ಸ್ವಾದ ಹಾಗೂ ಬಣ್ಣಗಳಿಂದಾಗಿ ಆಕರ್ಷಕವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಅನಂತಮೂರ್ತಿ ಜವುಳಿ ಅವರು ಮಾತನಾಡಿ, ಈ ಹಣ್ಣುಗಳು ಇತರೆ ಜಾತಿಯ ಹಣ್ಣುಗಳಿಗಿಂತ ಹೆಚ್ಚಿನ ತಿರುಳನ್ನು ಹೊಂದಿವೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಅದರ ಸ್ವಾದವನ್ನು ಕಳೆದುಕೊಳ್ಳದ ವಿಶಿಷ್ಟ ಸ್ವಭಾವವುಳ್ಳದ್ದಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಇಳುವರಿಯೊಂದಿಗೆ ಕಟಾವಿಗೆ ಸಿದ್ಧವಾಗಿರಲಿವೆ ಎಂದರು.

ಈ ಸಂದರ್ಭದಲ್ಲಿ ಹಲಸು ಬೆಳೆಗಾರರಾದ ಅನಂತಮೂರ್ತಿ ಜವುಳಿ, ಪ್ರಕಾಶನಾಯಕ್, ದೇವರಾಜ ಎಸ್. ರಾಜೇಂದ್ರ ಟಿ ಇವರುಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಪತ್ರಿಕಾಗೋಷ್ಟಿಯಲ್ಲಿ ಪ್ರಾಧ್ಯಾಪಕ ಡಾ|| ನಾಗರಾಜಪ್ಪ ಅಡಿವೆಪ್ಪರ್, ಸಹ ಸಂಶೋಧನಾ ನಿರ್ದೇಶಕ ಡಾ|| ಜಿ.ಎನ್.ತಿಪ್ಪೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ಆರ್.ಮಾರುತಿ, ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಸೇರಿದಂತೆ ಹಲಸು ಬೆಳೆಗಾರರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here