Views: 0
ಕಂದಾಯ ಆಯುಕ್ತಾಲಯದಲ್ಲಿ ಒಪ್ಪಂದದ ಆಧಾರದಲ್ಲಿ ಕಾನೂನು ಅಧಿಕಾರಿ, ಸಹಾಯಕ ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜೂನ್ 19:
ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯ ಹಾಗೂ ಇತರೇ ನ್ಯಾಯಾಲಯಗಳಲ್ಲಿ ದಾಖಲಾಗಿ, ಬಾಕಿಯಿರುವ ಪ್ರಕರಣಗಳನ್ನು ಅತಿ ಶೀಘ್ರವಾಗಿ ಇತ್ಯರ್ಥಪಡಿಸಲು ಕಂದಾಯ ಆಯುಕ್ತಾಲಯದಲ್ಲಿ ಕಾನೂನು ಕೋಶವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಕಾನೂನು ಅಧಿಕಾರಿ 4 ಹುದ್ದೆಗಳು ಮತ್ತು ಸಹಾಯಕ ಕಾನೂನು ಅಧಿಕಾರಿ 4 ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಕಾನೂನು ಅಧಿಕಾರಿ 04 ಹುದ್ದೆಗಳಿಗೆ ನಿವೃತ್ತ ಸರ್ಕಾರಿ ಕಾನೂನು ಅಧಿಕಾರಿ ಅಥವಾ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಎಲ್‍ಎಲ್‍ಬಿ ವಿದ್ಯಾರ್ಹತೆ ಹೊಂದಿರುವ ನಿವೃತ್ತ ಕಂದಾಯ ಅಧಿಕಾರಿ / ನಿವೃತ್ತ ಕೆ.ಎ.ಎಸ್. ಅಧಿಕಾರಿ ಅಥವಾ ಕನಿಷ್ಟ 10 ವರ್ಷಗಳ ಕಾಲ ಭೂ ಕಂದಾಯ ವ್ಯಾಜ್ಯಗಳ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ವಕೀಲರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಮಾಸಿಕ ರೂ. 70,000/- ವೇತನ ನೀಡಲಾಗುವುದು.
ಸಹಾಯಕ ಕಾನೂನು ಅಧಿಕಾರಿ 04 ಹುದ್ದೆಗಳಿಗೆ ಇಂಟರ್‍ಶಿಪ್‍ನಲ್ಲಿರುವ ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳಿಗೆ ಮಾಸಿಕ ರೂ. 20,000/- ವೇತನ ನೀಡಲಾಗುವುದು. ಈ ನೇಮಕಾತಿ ಅವಧಿಯು ಕನಿಷ್ಠ 1 ವರ್ಷವಾಗಿದ್ದು, ಸೇವೆ ತೃಪ್ತಿಕರವಾಗದಿದ್ದಲ್ಲಿ ಒಪ್ಪಂದದ ಮೇಲೆ ನೇಮಕಾತಿ ಮಾಡಿರುವುದನ್ನು ರದ್ದುಗೊಳಿಸಿ ಸೇವೆಯಿಂದ ಬಿಡುಗಡೆಗೊಳಿಸಲಾಗುವುದು.
ಆಸಕ್ತರು ಜೂನ್ 20 ರೊಳಗಾಗಿ ಅರ್ಜಿಯ ಜೊತೆಗೆ ವೈಯುಕ್ತಿಕ ಮಾಹಿತಿಗಳು ಮತ್ತು ವಿದ್ಯಾರ್ಹತೆ ಹಾಗೂ ಸೇವಾ ಅನುಭವದ ದೃಢೀಕೃತ ದಾಖಲೆಗಳೊಂದಿಗೆ ಇ-ಮೇಲ್ commrrd@gmail.com ಗೆ ಸಲ್ಲಿಸಬೇಕು.
ಒಪ್ಪಂದದ ಅವಧಿಯನ್ನು ಮುಂದುವರೆಸುವ ಅಥವಾ ಸೇವೆಯಿಂದ ಬಿಡುಗಡೆಗೊಳಿಸುವ ಹಕ್ಕನ್ನು ಕಂದಾಯ ಆಯುಕ್ತರು ಹೊಂದಿರುತ್ತಾರೆ. ನೇಮಕಗೊಳ್ಳುವವರಿಗೆ ವಾಹನ ಸೌಲಭ್ಯ, ವಾಹನ ಭತ್ಯೆ, ಇತರೆ ಯಾವುದೇ ಭತ್ಯೆಗಳನ್ನು ಪಾವತಿಸಲಾಗುವುದಿಲ್ಲ. ವಕೀಲ ವೃತ್ತಿಯಲ್ಲಿರುವವರು ಬಾರ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರುವ ಬಗ್ಗೆ ದೃಢೀಕೃತ ಪ್ರಮಾಣಪತ್ರ ಲಗತ್ತಿಸುವುದು. ನೇಮಕಗೊಂಡಲ್ಲಿ ಸರ್ಕಾರಿ ಕಚೇರಿ ಅವಧಿಯಲ್ಲಿ ಕಡ್ಡಾಯವಾಗಿ ಹಾಜರಿದ್ದು, ಕಾರ್ಯನಿರ್ವಹಿಸುವುದು ಎಂದು ಕಂದಾಯ ಆಯುಕ್ತಾಲಯದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.