ಬೆಂಗಳೂರು ನಗರ ಜಿಲ್ಲೆ, ಜೂನ್ 21:
ಮಾನವನ ದಿನನಿತ್ಯದ ಒತ್ತಡದ ಜೀವನಕ್ಕೆ ಯೋಗಾಸನ ಔಷಧಿಯಂತೆ ಎಂದು ಯೋಗ ಗುರುಗಳಾದ ಡಾ. ಎನ್.ಆರಾಧ್ಯ ಅವರು ಹೇಳಿದರು.
ಇಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ನಮ್ಮ ಮನಸ್ಸಿನಲ್ಲಿರುವ ಋಣಾತ್ಮಕ ಗುಣಗಳನ್ನು ಹೊರಹಾಕಿ, ಧನಾತ್ಮಕ ಭಾವನೆಯನ್ನು ಲಭಿಸುವಂತೆ ಮಾಡುವ ಶಕ್ತಿಯನ್ನು ಒಳಗೊಂಡಿದೆ. ಉತ್ತಮವಾದ ಆರೋಗ್ಯ ಬೇಕು ಎಂದರೆ ಪ್ರತಿನಿತ್ಯ ಯೋಗ ಮಾಡಿ ಎಂದು ಕಿವಿಮಾತು ಹೇಳಿದರು. ಪ್ರಸ್ತುತ 200 ದೇಶಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಅವರು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ದೇಶದ ಅಭಿವೃದ್ಧಿಗೆ ಮತ್ತು ಸಮಾಜದ ಕಲ್ಯಾಣಕ್ಕೆ ಯೋಗ ಸುಸ್ಥಿರ ಸಾಧನ. ಔಷಧಿಯಿಂದ ತಪ್ಪಿಸಿಕೊಳ್ಳಲು ಯೋಗವೊಂದು ಅಸ್ತ್ರ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ಜವರೇಗೌಡ ಟಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳಾದ ವಿಜಯಲಕ್ಷ್ಮೀ ಎಂ.ವಿ, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.