ನಟ ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲು; ಕ್ಷಮೆ ಕೇಳಿದ ಶಫಿ
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗಲಾಟೆ ನಾನಾ ರೀತಿಯಲ್ಲಿ ಮುಂದುವರೆದಿದೆ. ಏಟು-ತಿರುಗೇಟುಗಳ ಮೂಲಕ ಸುದ್ದಿಯಲ್ಲಿರುವ ದರ್ಶನ್, ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ‘ಗೌಡತಿ ಸೇನೆ’ ಎಂಬ ಸಂಘಟನೆಯ ಮುಖಂಡೆಯರು ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ಗುರುವಾರ ದೂರು ನೀಡಿದ್ದರು. ಇದೀಗ, ಶುಕ್ರವಾರ ಮತ್ತೆರಡು ದೂರುಗಳು ದಾಖಲಾಗಿವೆ.
‘ಇವತ್ತು ಒಬ್ಬಳು, ನಾಳೆ ಮತ್ತೊಬ್ಬಳು’ ಎಂಬ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಸಿಲುಕಿರುವ ನಟ ದರ್ಶನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ದೂರು ದಾಖಲಾಗಿದೆ. ಮಾತ್ರವಲ್ಲದೆ, ಆರ್.ಆರ್ ನಗರ ಠಾಣೆಯಲ್ಲಿ ಗಣೇಶ್ ಗೌಡ ಎಂಬವರು ಮತ್ತು ಚಂದ್ರಲೇಔಟ್ ಠಾಣೆಯಲ್ಲಿ ಜಗದೀಶ್ ಎಂಬವವರು ದರ್ಶನ್ ವಿರುದ್ಧ ದೂರು ದಾಖಲಿಸಿದ್ದಾರೆ.
“ಪ್ರಭಾವಿ ಸಮುದಾಯದ ನಾಯಕರು ಮತ್ತು ಹೆಣ್ಣು ಮಕ್ಕಳ ಬಗ್ಗೆ ನಟ ದರ್ಶನ್ ತುಚ್ಛವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳನ್ನು ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತಹ ಅರ್ಥದಲ್ಲಿ ದರ್ಶನ್ ಮಾತನಾಡಿದ್ದಾರೆ. ಅವರ ಮಾತು ಮಹಿಳಾ ಕುಲಕ್ಕೆ ಅಪಮಾನ ಮಾಡಿದೆ. ಅಲ್ಲದೆ, ಒಕ್ಕಲಿಗ ನಾಯಕರ ವಿರುದ್ಧ ಅಪಹಾಸ್ಯ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ಹಿಂಪಡೆದು ಕ್ಷಮೆ ಕೇಳಿದ ದೂರುದಾರ
ನಿರ್ಮಾಪಕ ಉಮಾಪತಿ ಅವರನ್ನು ದರ್ಶನ್ ನಿಂದಿಸಿದ್ದಾರೆ ಎಂದು ಆರೋಪಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದ ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎಂಬವರು ಇದೀಗ ಉಲ್ಟಾ ಹೊಡೆದಿದ್ದಾರೆ. ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿ ಹೇಳಿರುವ ಅವರು ದರ್ಶನ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.