ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ.20:-
ನಿರುದ್ಯೋಗ ಯುವಕ-ಯುವತಿಯರಿಗೆ ವೃತ್ತಿಪರ ತರಬೇತಿ ಹಾಗೂ ಉದ್ಯಮಶೀಲತೆ ಚಟುವಟಿಕೆಗಳ ತರಬೇತಿಯನ್ನು ವಿವಿಧ ತರಬೇತಿ ಸಂಸ್ಥೆಗಳ ಮೂಲಕ ಉಚಿತವಾಗಿ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜುಲೈ ಮಾಹೇ ವರೆಗೆ 2179 ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 1506 ನಿರುದ್ಯೋಗಿಗಳು ವಿವಿಧ ತರಬೇತಿ ಸಂಸ್ಥೆಯಲ್ಲಿ ಸ್ವಯಂ ಉದ್ಯೋಗ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿರುವ ವಿವಿಧ ಖಾಸಗಿ ಕೈಗಾರಿಕಾ ವಲಯಗಳಲ್ಲಿ ಆಪರೇಟರ್, ಟೈಲರ್, ಕಂಪ್ಯೂಟರ್ ಆಪರೇಟರ್, ಹೆಲ್ಪರ್, ಟ್ರೈನಿ, ಟೆಕ್ನಿಶನ್, ಇಂಜನೀಯರ್ಸ್, ಸೆಕ್ಯುರಿಟಿ ಗಾರ್ಡ್ ಸೇರಿ 3400 ಉದ್ಯೋಗಿಗಳಿಗೆ ಹೆಚ್ಚಿನ ಬೇಡಿಕೆಗಳಿದ್ದು, ಅರ್ಹ ನಿರುದ್ಯೋಗಿಗಳಿಗೆ ತರಬೇತಿ ಮೂಲಕ ಉದ್ಯೋಗ ಸಿಗುವಂತಾಗಬೇಕು.
ಪಿ.ಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ 105 ಅಭ್ಯರ್ಥಿಗಳು ಸ್ವಯಂ ಉದ್ಯಮ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಡೇ-ನಲ್ಮ್ ಯೋಜನೆಯ ಎಲ್ಲ ಉಪಘಟಕಗಳ ಪ್ರಗತಿ ಪರಿಶೀಲನೆ, ಪಿ.ಎಂ. ಸ್ವ-ನಿಧಿ, ಪಿ.ಎಂ ವಿಶ್ವಕರ್ಮ ಯೋಜನೆಯಡಿ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಪಡೆದು ಸಾಲ ಮಂಜೂರಾತಿ ಹಾಗೂ ವಿತರಣೆಗೆ ಆದ್ಯತಾನುಸಾರ ಕ್ರಮವಹಿಸಿ, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮಾ, ಸಿಬ್ಬಂದಿ ಉಪಸ್ಥಿತರಿದ್ದರು.