ಮಳೆ ಹಾನಿ ಪ್ರದೇಶಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ

0
57
Share this Article
0
(0)
Views: 3
 

ಮಳೆ ಹಾನಿ ಪ್ರದೇಶಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ; ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು, ಒಳಚರಂಡಿ ಹಾಗೂ ರಸ್ತೆ ಬದಿ ಚರಂಡಿಗಳ ಸ್ವಚ್ಚಗೊಳಿಸಲು ಸೂಚನೆ

ಬೆಂಗಳೂರು, ಆ.12:

ಭಾನುವಾರ ರಾತ್ರಿ ಸುರಿದ ಮಳೆಯಿಂದ ನೀರು ನುಗ್ಗಿ ಹಾನಿಗೊಳಗಾದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು. 

ಹೆಬ್ಬಾಳ ಸಮೀಪದ ಯೋಗೇಶ್ವರ ನಗರ, ನಾಗವಾರ ಜಂಕ್ಷನ್ ಹಾಗೂ ಎಚ್ಬಿಆರ್ ಲೇಔಟ್ 5ನೇ ಬ್ಲಾಕ್, ಸಿಲ್ಕ್ ಬೋರ್ಡ್, ಜಯದೇವ ಜಂಕ್ಷನ್ ಸೇರಿದಂತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಗೇಶ್ವರ ನಗರದ ಮೇಲ್ಸೇತುವೆ ಬಳಿ ನೀರಿನ ಹರಿವು ಹಾಗೂ ರಾಜಕಾಲುವೆ ವೀಕ್ಷಣೆ ಮಾಡಿ “ನೀರು ಹರಿವಿಗೆ ತೊಂದರೆ ಏಕೆ ಉಂಟಾಗಿದೆ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. “ಕಾಮಗಾರಿಗಳು ನಡೆದ ನಂತರ ಕಟ್ಟಡ ತ್ಯಾಜ್ಯಗಳನ್ನು ಸ್ಥಳದಲ್ಲೇ ಏಕೆ ಬಿಡಲಾಗಿದೆ? ಕೂಡಲೇ ಎಲ್ಲಾ ಕಡೆ ಸ್ವಚ್ಚಗೊಳಿಸಿ” ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಇಡೀ ಪ್ರದೇಶದಲ್ಲಿ ಒಂದು ಸುತ್ತು ಬಂದ ಡಿಸಿಎಂ ಶಿವಕುಮಾರ್ ಅವರು “ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಎಲ್ಲಾ ಕಡೆ ರಸ್ತೆ ಬದಿ ಚರಂಡಿಗಳು ಹಾಗೂ ಒಳಚರಂಡಿಗಳನ್ನು ಸ್ವಚ್ಚಗೊಳಿಸಬೇಕು” ಎಂದು ಹೇಳಿದರು. 

ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ವೀಕ್ಷಣೆ ಮಾಡಿ ಮಾತನಾಡಿದ ಅವರು “ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಸ್ವಚ್ಚತೆಯಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಎಲ್ಲೆಲ್ಲಿ ಬಿಎಂಆರ್ ಸಿಎಲ್ ಅವರು ಕಾಮಗಾರಿ ನಡೆಸುವಾಗ ಕಟ್ಟಡ ತ್ಯಾಜ್ಯಗಳು ರಾಜಕಾಲುವೆಯಲ್ಲಿ ಉಳಿದಿದ್ದರೇ ಕೂಡಲೇ ತೆರವು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಕೆಲವೊಂದು ಕಡೆ ನೀರು ಹರಿಯುವ ಜಾಗಗಳು ಕಿರದಾಗಿದ್ದು ಅವುಗಳ ಅಗಲೀಕರಣ ಮಾಡುವಂತೆ ತಿಳಿಸಲಾಗಿದೆ” ಎಂದರು.

ಮಾರುತಿ ಸೇವಾನಗರದಲ್ಲಿ ಸೋಮವಾರ ಬೆಳಗ್ಗೆ ಮರ ಬಿದ್ದ ಕಾರಣಕ್ಕೆ ನಾಲ್ವರು ಗಾಯಗೊಂಡಿದ್ದರು. ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಹಾಗೂ ಗಾಯಾಳುಗಳ ಎಲ್ಲಾ ಖರ್ಚು ವೆಚ್ಚಗಳನ್ನು ಬಿಬಿಎಂಪಿಯಿಂದ ಭರಿಸಲಾಗುವುದು” ಎಂದು ತಿಳಿಸಿದರು.

*ಮಾಧ್ಯಮ ಪ್ರತಿಕ್ರಿಯೆ:*

ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ನಗರ ಸಂಚಾರದ ವೇಳೆ ಸಾಕಷ್ಟು ರಸ್ತೆಗುಂಡಿಗಳು ಕಂಡು ಬಂದವು. ಮಳೆ ಹೆಚ್ಚಾದ ಕಾರಣಕ್ಕೆ ಸುಮಾರು ಅರ್ಧ ಅಡಿಗೂ ಆಳದ ಗುಂಡಿಗಲಾಗಿವೆ. ಇವುಗಳನ್ನು ಕೂಡಲೇ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸರಿಗೂ ಎಲ್ಲಿಲ್ಲಿ ರಸ್ತೆಗುಂಡಿಗಳಿವೆ ಅದರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇನೆ. ಈಗಾಗಲೇ ನೂತನ ಆಪ್ ಅನ್ನು ಬಿಡುಗಡೆ ಮಾಡಿದ್ದು ಅಲ್ಲಿ ಫೋಟೊ ತೆಗೆದು ಹಾಕಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

“ರಾಜಕಾಲುವೆಗಳಿಗೆ ರಕ್ಷಣಾ ಗೋಡೆಗಳನ್ನು ಎಲ್ಲಾ ಕಡೆ ನಿರ್ಮಾಣ ಹಾಗೂ ರಸ್ತೆ ನಿರ್ಮಾಣದ ತೀರ್ಮಾನ ಮಾಡಲಾಗಿದೆ. ಅಲ್ಲದೇ ಅನೇಕ ಕಡೆ ರಸ್ತೆ ಫುಟ್ ಪಾತ್ ಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದೆ. ಇದರ ಬಗ್ಗೆ ಕ್ರಮವಹಿಸಲಾಗುವುದು. ಇದರಿಂದ ಮೋರಿ ಮುಚ್ಚಿಕೊಳ್ಳುವುದು, ನೀರಿನ ಹರಿವಿಗೆ ತೊಂದರೆ ಉಂಟಾಗುತ್ತಿದೆ. ಅನೇಕ ಉದ್ಯಾನಗಳಲ್ಲೂ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದರ ಬಗ್ಗೆ ಗಮನಹರಿಸಲಾಗುವುದು“ ಎಂದರು.

ಒಣಗಿದ್ದ ಬೃಹತ್ ಮರದ ತೆರವಿಗೆ ಈ ಹಿಂದೆಯೇ ಸಾರ್ವಜನಿಕರು ದೂರು ನೀಡಿದ್ದರು ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಕೇಳಿದಾಗ “ಇಡೀ ಬೆಂಗಳೂರಿನಾದ್ಯಂತ ಕೂಡಲೇ ಒಣಗಿದ ಮರಗಳ ತೆರವು ಮಾಡಲಾಗುವುದು. ಎಲ್ಲೆಲ್ಲಿ ತೆರವು ಮಾಡಬೇಕು ಎನ್ನುವ ಬಗ್ಗೆ ಪಟ್ಟಿ ತಯಾರಿಸಿ ಮುಂದುವರೆಯಲಾಗುವುದು. ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ಬಗ್ಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

“ಬೆಂಗಳೂರಿನಲ್ಲಿ ಅಂತಹ ಮಳೆ ಬಂದಿಲ್ಲ. ರಾಜ್ಯದ ಇತರೆಡೆ ಉತ್ತಮ ಮಳೆ ಬಂದಿದೆ. ಬೆಂಗಳೂರು ಸುತ್ತಲೂ ಯಾವ ಕೆರೆಗಳೂ ತುಂಬಿಲ್ಲ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಮಳೆ ಬಂದಿಲ್ಲ. ಪಶ್ಚಿಮ ಘಟ್ಟ ಸೇರಿದಂತೆ ಒಂದಷ್ಟು ಕಡೆ ಮಳೆ ಬಂದು ಅಣೆಕಟ್ಟುಗಳು ತುಂಬಿವೆ. ಬೆಂಗಳೂರು ನಗರದ ಒಳಗಿರುವ ಕೆರೆಗಳಲ್ಲೂ ಅಷ್ಟಾಗಿ ನೀರಿಲ್ಲ. ಅಪಾರ್ಟ್ ಮೆಂಟ್ ಗಳಿಗೆ ನೀರು ನುಗಿದ್ದರೆ ಸರಿ ಮಾಡೋಣ. ಜೊತೆಗೆ ಮಳೆಯೂ ಚೆನ್ನಾಗಿ ಬರಬೇಕು, ಕೆರೆಗಳು ತುಂಬಬೇಕು, ಅಂತರ್ಜಲ ಹೆಚ್ಚಾಗಬೇಕು. ಮಳೆ ಇನ್ನೂ ಸಾಲದು” ಎಂದರು.

ಸಂಚಾರಿ ಪೊಲೀಸರೆ ಹೆಚ್ಚು ಕೆಲಸ ಮಾಡುತ್ತಿದ್ದು ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಬರುತ್ತಿಲ್ಲ ಎಂದು ಕೇಳಿದಾಗ “ಇದರ ಬಗ್ಗೆ ಗಮನ ನೀಡಲಾಗುವುದು. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಮಾಡಿಕೊಂಡ ಕಾರಣಕ್ಕೆ ಕಸ ಹೆಚ್ಚಾಗಿದೆ ಇದರ ತೆರವಿನ ಬಗ್ಗೆ ಗಮನ ನೀಡಲಾಗುವುದು” ಎಂದು ಹೇಳಿದರು.

 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here