ಬೆಂಗಳೂರು, ಸೆ.08
ನಾನು ಒಂದು ವಾರಗಳ ಕಾಲ ಖಾಸಗಿ ಕೆಲಸದ ಮೇಲೆ ವಿದೇಶ ಪ್ರವಾಸ ಬೆಳೆಸುತ್ತಿದ್ದು, ನಾನು ಕೊಟ್ಟಿರುವ ಗಡುವಿನಲ್ಲಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಮುಚ್ಚಬೇಕು. ಈ ವಿಚಾರದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳನ್ನು Transaction ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಬೆಂಗಳೂರಿನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಸಭೆ ನಡೆಸಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಇಂದು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ, ಕೊಟ್ಟಿರುವ 15 ದಿನಗಳ ಗಡುವಿನ ಒಳಗೆ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕು ಎಂದು ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದರು.
ರಸ್ತೆ ಗುಂಡಿ ವಿಚಾರವಾಗಿ ಸಾರ್ವಜನಿಕರಿಂದ ಮತ್ತೆ ದೂರು ಬಂದರೆ ಇದಕ್ಕೆ ಜವಾಬ್ದಾರಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಷ್ಟು ಜನ ಅಮಾನತುಗೊಳ್ಳುತ್ತಾರೋ ಗೊತ್ತಿಲ್ಲ ಎಂದೂ ತಿಳಿಸಿದರು.
ಪಾಲಿಕೆಯ ಪ್ರತಿ ಅಧಿಕಾರಿಗಳು ಎಷ್ಟೇ ದೊಡ್ಡವರಿದ್ದರೂ ಪ್ರತಿಯೊಬ್ಬರೂ ರಸ್ತೆಯಲ್ಲಿ ನಿಂತು ಈ ಸಮಸ್ಯೆ ಬಗೆಹರಿಸಬೇಕು. ವಾರ್ಡ್ ಗಳಲ್ಲಿ ಅಧಿಕಾರಿಗಳೇ ಮುಂದೆ ನಿಂತು ಗುಂಡಿ ಮುಚ್ಚುವ ಕೆಲಸ ಮಾಡಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ನಾವು ಬಹಳ ಜಾಗರೂಕರಾಗಿ ಇರಬೇಕು. ಮಳೆ ಬೀಳುವ ಸಂದರ್ಭದಲ್ಲಿ ನೀರು ನಿಲ್ಲುವ ಹಾಗೂ ಮನೆಗಳಿಗೆ ನುಗ್ಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದೇನೆ ಎಂದರು.
ಮಳೆಗೆ ಬೀಳಬಹುದಾದ ಮರಗಳನ್ನು ಮೇಲ್ಭಾಗದಲ್ಲಿ ಟ್ರಿಮ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಕುರಿತು ಪ್ರತಿಜ್ಞಾ ಕಾರ್ಯಕ್ರಮ
“ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಿ 100 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ಬೆಂಗಳೂರು ನಗರದ ಎಲ್ಲಾ ಶಾಲೆಗಳಲ್ಲಿ (ಪಾಲಿಕೆ ಹಾಗೂ ಖಾಸಗಿ ಶಾಲೆಗಳೂ ಸೇರಿ) ಗಾಂಧಿ ಜಯಂತಿ ದಿನದಂದು ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಮಾಡಬೇಕು. ಆ ಮೂಲಕ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುವುದು” ಎಂದು ತಿಳಿಸಿದರು.
ಪ್ರವಾಸದ ನಂತರ ನೀವೇ ರಸ್ತೆಗಳ ಪರಿಶೀಲನೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, “ನಾನೇ ಖುದ್ದಾಗಿ ನಗರ ಪ್ರದಕ್ಷಣೆ ಮಾಡಿ ರಸ್ತೆಗಳ ಸ್ಥಿತಿಗಳನ್ನು ಪರಿಶೀಲಿಸುತ್ತೇನೆ. ಅಧಿಕಾರಿಗಳು ಬೇಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದರೆ ಅವರನ್ನು ಅಮಾನತು ಮಾಡಲಾಗುವುದು” ಎಂದು ಪುನರುಚ್ಚಸಿದರು.