ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0
27
Share this Article
0
(0)
Views: 3

ಬೆಂಗಳೂರು, ನವೆಂಬರ್ 29:

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ, ರಾಜ್ಯಕ್ಕೆ ಅತ್ಯಂತ ಪ್ರಮುಖವಾದ ಕೆಲವು ವಿಷಯಗಳ ಬಗ್ಗೆ ತಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ.

ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರಾಜ್ಯದ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿದೆ. 2023-24ರ ಸಾಲಿನಲ್ಲಿ ರೂ.5600 ಕೋಟಿಗಳನ್ನು ಮಂಜೂರು ಮಾಡಲಾಗಿತ್ತು. 2024 -25ರ ಸಾಲಿನಲ್ಲಿ ರೂ. 2,340 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇದರಿಂದಾಗಿ ನಬಾರ್ಡ್ ನೆರವು ಪ್ರಸಕ್ತ ಸಾಲಿನಲ್ಲಿ ಶೇ.58 ರಷ್ಟು ಕಡಿತವಾಗಿದೆ.

ರಾಜ್ಯವು ಹೆಚ್ಚುವರಿ ಬಡ್ಡಿ ಸಹಾಯಧನವನ್ನು ನೀಡದ ಹೊರತು, ಇದು ರಾಜ್ಯದ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಆದ್ದರಿಂದ ಈ ಕೂಡಲೇ ಇದನ್ನು ಪರಾಮರ್ಶಿಸಿ ನಬಾರ್ಡ್ ನೆರವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ರಾಜ್ಯದ ರೈತರು ಅಲ್ಪಾವಧಿ ಬೆಳೆ ಸಾಲಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆಯಾಗದಂತೆ ತಾವು ಹಣಕಾಸು ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತಿದ್ದೇನೆ.

ಎರಡನೆಯದಾಗಿ, ಈ ಮೊದಲೇ ತಮ್ಮಲ್ಲಿ ಮನವಿ ಮಾಡಿರುವಂತೆ, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 2023-24 ರ ಕೇಂದ್ರ ಬಜೆಟ್ ನಲ್ಲಿ ಅನುಮೋದನೆಯಾಗಿರುವ ರೂ. 5300 ಕೋಟಿ ಅನುದಾನ ಬಿಡುಗಡೆ ಮಾಡುವ ಕೇಂದ್ರ ಹಣಕಾಸು ಸಚಿವರ ಭರವಸೆ ಈವರೆಗೆ ಈಡೇರಿಲ್ಲ. ತ್ವರಿತ ನೀರಾವರಿ ಲಾಭ ಕಾರ್ಯಕ್ರಮದಡಿ ನೆರವು ಒದಗಿಸಲು ಸಚಿವ ಸಂಪುಟದ ಟಿಪ್ಪಣಿಯನ್ನು ಸಿದ್ದಮಾಡಿರುವ ಬಗ್ಗೆ ತಿಳಿದುಬಂದಿದೆ. ಪ್ರಸಕ್ತ ಯೋಜನೆ ಶೀಘ್ರ ಅನುಮೋದನೆಗೊಂಡಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ಮಧ್ಯ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಲು ತಮ್ಮಲ್ಲಿ ಮನವಿ ಮಾಡುತ್ತೇನೆ.

ಮೂರನೆಯದಾಗಿ ಶುಷ್ಕ ವಲಯಕ್ಕೆ ಸೇರಿದ ಕರ್ನಾಟಕದಂತಹ ರಾಜ್ಯದಲ್ಲಿ ನೀರಾವರಿ ಸೌಲಭ್ಯ ಸಾಮಥ್ರ್ಯಗಳನ್ನು ಸಬಲಗೊಳಿಸುವುದು ಅತ್ಯಗತ್ಯವಾಗಿದೆ. ಈ ಕಾರ್ಯವನ್ನು ಬಹುತೇಕ ರಾಜ್ಯವು ತನ್ನ ಸಂಪನ್ಮೂಲಗಳಿಂದಲೇ ಭರಿಸುತ್ತಿದೆ. ಆದರೆ, ಜಲ ಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳಲ್ಲಿ ಯೋಜನೆಗಳ ತೀರುವಳಿ ಬಾಕಿ ಇರುವುದು ನಮ್ಮ ಯೋಜನೆಗಳನ್ನು ವಿಳಂಬ ಮಾಡಿದೆ. ಕಾವೇರಿ ನದಿ ಪಾತ್ರದ ಮೇಕೇದಾಟು ಯೋಜನೆ ಹಾಗೂ ಮಹದಾಯಿ ನದಿಯ ಕಳಸಾಬಂಡೂರಿ ಯೋಜನೆಗಳಗತ್ತ ತಾವು ತುರ್ತು ಗಮನ ಹರಿಸಬೇಕಿದೆ ಜಲಶಕ್ತಿ ಹಾಗೂ ಅರಣ್ಯ, ಪರಿಸರ ಸಚಿವಾಲಯಗಳಿಂದ ಶೀಘ್ರ ತೀರುವಳಿ ದೊರಕಿಸಿಕೊಡಲು ಕೋರಲಾಗಿದೆ.

ನಾಲ್ಕನೇಯದ್ದಾಗಿ, ಕರ್ನಾಟಕ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯವಾಗಿದ್ದು, 13 ಮಹಾನಗರ ಪಾಲಿಕೆಗಳಿದ್ದು, ಈ ಎರಡನೇ ಸ್ತರದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಅಗತ್ಯವಿದೆ. ಕರ್ನಾಟಕ ರಾಜ್ಯ ಸರ್ಕಾರ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ 2 ಸಾವಿರ ಕೋಟಿ ರೂ. ಈ ಉದ್ದೇಶಕ್ಕಾಗಿ ತೆಗೆದಿರಿಸಿದೆ. ಆದರೆ ಈ ನಗರಗಳಿಗೆ ಸಮಗ್ರ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ಅಮೃತ್ ಅಥವಾ ಇನ್ನಾವುದೇ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲು ನಾನು ಕೋರುತ್ತೇನೆ.

ಕೊನೆಯದಾಗಿ, 15ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ನಾವು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.1 ರಷ್ಟು ಕಡಿಮೆ ಮಾಡಿರುವ ಶಿಫಾರಸ್ಸನ್ನು ಹಣಕಾಸು ಇಲಾಖೆ ಸರಿಪಡಿಸಬೇಕಾಗಿದೆ. ಹಣಕಾಸು ಆಯೋಗವು ರಾಜ್ಯಕ್ಕೆ ಹಂಚಿಕೆ ಕಡಿಮೆಯಾಗಿರುವುದಕ್ಕೆ ಪರಿಹಾರವಾಗಿ ರೂ.5495 ಕೋಟಿ ಅನುದಾನ ಬಿಡುಗಡೆಗೆ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಮತ್ತು ನೀರಿನ ಮೂಲಗಳ ಪುನರುಜ್ಜೀವನಕ್ಕೆ ರೂ. 6 ಸಾವಿರ ಕೋಟಿ ವಿಶೇಷ ಅನುದಾನ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಕನಿಷ್ಟ ಪಕ್ಷ ಹಣಕಾಸು ಆಯೋಗ ಈ ಎರಡು ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕಾಗಿದೆ.ನಾವು ಇನ್ನೂ 15ನೇ ಹಣಕಾಸು ಆಯೋಗದ ಅವಧಿಯಲ್ಲಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡುವಂತೆ ಪುನಃ ನಾನು ಮನವಿ ಮಾಡುತ್ತೇನೆ.

16ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರದ ತೆರಿಗೆ ಪಾಲಿಗೆ ಹೆಚ್ಚಿನ ದೇಣಿಗೆ ಒದಗಿಸುವ ರಾಜ್ಯಗಳಿಗೆ, ಕೇಂದ್ರದ ತೆರಿಗೆ ಪಾಲಿನಲ್ಲಿ ಭಾರೀ ಕಡಿತ ಮಾಡಿ ಶಿಕ್ಷಿಸದಂತೆ, ಹಣಕಾಸು ಇಲಾಖೆ ಖಾತ್ರಿಪಡಿಸಬೇಕು.

ನಮ್ಮ ಮನವಿಗೆ ಸೂಕ್ತ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here