ಲೋಕಪಾಲ್ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇಮಕ
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಜಯ್ ಮಾಣಿಕ್ ರಾವ್ ಖಾನ್ವಿಲ್ಕರ್ ಅವರನ್ನು ಲೋಕಪಾಲದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.
ಇವರೊಂದಿಗೆ ನ್ಯಾಯಮೂರ್ತಿ ಲಿಂಗಪ್ಪ ನಾರಾಯಣ ಸ್ವಾಮಿ, ನ್ಯಾಯಮೂರ್ತಿ ಸಂಜಯ್ ಯಾದವ್, ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ಸುಶೀಲ್ ಚಂದ್ರ, ಪಂಕಜ್ ಕುಮಾರ್ ಮತ್ತು ಅಜಯ್ ಟಿರ್ಕಿ ಅವರನ್ನು ಲೋಕಪಾಲ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
2016 ರ ಮೇ 13 ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದ ಅವರು 5 ವರ್ಷಗಳಿಗೂ ಅಧಿಕ ಅವಧಿಯ ಸೇವೆಯನ್ನು ನೀಡುವ ಮೂಲಕ ಅನೇಕ ತೀರ್ಪುಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದರು.
ಪ್ರಮುಖವಾಗಿ ಆಧಾರ್ ಪ್ರಕರಣದ ತೀರ್ಪು, 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಇತರ 63 ಜನರಿಗೆ ಎಸ್‌ಐಟಿ ನೀಡಿದ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿ ಹಿಡಿದಿದ್ದರು.
ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ರ ಅಡಿಯಲ್ಲಿ ಲೋಕಪಾಲ್ ಅಸ್ತಿತ್ವಕ್ಕೆ ಬಂದಿತ್ತು. ಲೋಕಪಾಲ ಕಾಯಿದೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಚಾರಣೆ ಮತ್ತು ತನಿಖೆ ನಡೆಸುವ ಕಾರ್ಯವನ್ನು ಲೋಕಪಾಲಕ್ಕೆ ವಹಿಸಲಾಗಿದೆ.
ಜಾರ್ಖಂಡ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಮೊಹಾಂತಿ ಅವರು ಲೋಕಪಾಲ್‌ನ ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ಲೋಕಪಾಲ್ ನ್ಯಾಯಾಂಗ ಸದಸ್ಯರಾಗಿ ನೇಮಕಗೊಂಡ ಅವರನ್ನು ಮೇ 2022ರಲ್ಲಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.