ದೇವನಹಳ್ಳಿ, ಡಿ.1
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ನೀರಿನ ಉಳಿತಾಯ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ 5 ಚೆಕ್ ಡ್ಯಾಂಗಳ ನಿರ್ಮಾಣದ ಕಾಮಗಾರಿಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಚಾಲನೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಾಳಿಗೆಹಳ್ಳಿ – ಅತ್ತಿಬೆಲೆ ಬಳಿ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಒಟ್ಟು 5 ಚೆಕ್ ಡ್ಯಾಂಗಳನ್ನು ಮಾಳಿಗೆಹಳ್ಳಿ, ಮಾಯಸಂದ್ರ, ವೆಂಕಟನಹಳ್ಳಿ, ಬೆಟ್ಟಕೋಟೆ, ವಿಜಯಪುರ ಗ್ರಾಮಗಳ ಬಳಿ ನಿರ್ಮಾಣ ಮಾಡಲಾಗುತ್ತಿದ್ದು, ಸುತ್ತ-ಮುತ್ತಲಿನ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ರೂ. 200 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಂಗಳ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳುವುದರೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಮುನಿರಾಜು, ಆವತಿ ಗ್ರಾ.ಪಂ ಅಧ್ಯಕ್ಷೆ ಮುನಿರತ್ನಮ್ಮ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.